ಬೆಂಗಳೂರಿನ ವರ್ತೂರಿನಲ್ಲಿರುವ ಜಲಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ (STP) ದುರಸ್ತಿ ಕಾರ್ಯದ ವೇಳೆ ಇಂಜಿನಿಯರ್ ಸೇರಿದಂತೆ ಇಬ್ಬರು ಆಯತಪ್ಪಿ ಟ್ಯಾಂಕ್‌ಗೆ ಬಿದ್ದು ನಾಪತ್ತೆಯಾಗಿದ್ದಾರೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಎನ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.
ಬೆಂಗಳೂರು: ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ (STP) ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ಇಂಜಿನಿಯರ್ ಸೇರಿದಂತೆ ಇಬ್ಬರು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ವರ್ತೂರಿನ ಬೆಳಗೆರೆಯಲ್ಲಿ ನಡೆದಿದೆ. ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ 5 ರಿಂದ 6 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದೆ.
ದುರಂತದ ಹಿನ್ನೆಲೆ:
ವರ್ತೂರಿನ ಬೆಳಗೆರೆಯಲ್ಲಿರುವ ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಮೂರು ಗೇಟ್‌ಗಳು ತಾಂತ್ರಿಕ ಸಮಸ್ಯೆಯಿಂದಾಗಿ ಕೆಟ್ಟುಹೋಗಿದ್ದವು. ಇದನ್ನು ದುರಸ್ತಿ ಮಾಡುವ ಸಲುವಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಏಣಿ ಹಾಕಿ ಘಟಕದ ಆಳಕ್ಕೆ ಇಳಿದಿದ್ದರು. ಈ ವೇಳೆ ಮೂವರೂ ಆಯತಪ್ಪಿ ನೇರವಾಗಿ ಕೊಳಚೆ ನೀರಿನ ಟ್ಯಾಂಕ್ ಒಳಗೆ ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಇತರ ಕಾರ್ಮಿಕರು ಜಾಗರೂಕರಾಗಿ ಒಬ್ಬನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಕಾರ್ಮಿಕ ಕಾರ್ತಿಕ್‌ನನ್ನು ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರು ದುರ್ದೈವಿಗಳು ನಾಪತ್ತೆ:
ಟ್ಯಾಂಕ್‌ಗೆ ಬಿದ್ದು ಕೊಳಚೆ ನೀರಿನಲ್ಲಿ ಕೊಚ್ಚಿಹೋಗಿರುವ ಇಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ತಮಿಳುನಾಡು ಮೂಲದ ಇಂಜಿನಿಯರ್ ಅಗಿಲನ್ ಮೋಹನ್ (30) ಹಾಗೂ ಬಿಹಾರ ಮೂಲದ ಸಿಬ್ಬಂದಿ ಬ್ರಜೇಶ್ ಕುಮಾರ್ (30) ಎಂದು ಗುರುತಿಸಲಾಗಿದೆ. ಬ್ರಜೇಶ್ ಕಳೆದ ಕೆಲವು ವರ್ಷಗಳಿಂದ ಇದೇ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸುರಕ್ಷತಾ ಕ್ರಮಗಳ ಸಂಪೂರ್ಣ ನಿರ್ಲಕ್ಷ್ಯ:
ಸುಮಾರು 40 ಅಡಿಗಳಷ್ಟು ಆಳವಿರುವ ಈ ಡ್ರೈನೇಜ್ ಪ್ಲಾಂಟ್‌ನಲ್ಲಿ ಕೋರಮಂಗಲದಿಂದ ವರ್ತೂರಿನವರೆಗೆ ಹರಿದು ಬರುವ ಕೊಳಚೆ ನೀರು ಸಂಗ್ರಹವಾಗುತ್ತದೆ. ಇಂತಹ ಅಪಾಯಕಾರಿ ಟ್ಯಾಂಕ್‌ಗಳ ಒಳಗೆ ಆಮ್ಲಜನಕ ಕೊರತೆ ಇರುತ್ತದೆ. ನಿಯಮದ ಪ್ರಕಾರ ಒಳಗೆ ಇಳಿಯುವ ಕಾರ್ಮಿಕರಿಗೆ ಆಕ್ಸಿಜನ್ ಕಿಟ್ ಹಾಗೂ ಗ್ಯಾಸ್ ಮಾಸ್ಕ್ ನೀಡಬೇಕು. ಆದರೆ, ಯಾವುದೇ ಕನಿಷ್ಠ ಸುರಕ್ಷತಾ ಸಾಧನವಾಗಲಿ ಅಥವಾ ಟ್ಯೂಬ್‌ಗಳನ್ನಾಗಲಿ ನೀಡದೆ ಕಾರ್ಮಿಕರನ್ನು ಇಳಿಸಿರುವುದು ಜಲಮಂಡಳಿ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ.
ಸಾವಿಗೂ ಮುನ್ನ ಮಕ್ಕಳೊಂದಿಗೆ ಮಾತನಾಡಿದ್ದ ಬ್ರಜೇಶ್!
ಪ್ಲಾಂಟ್‌ನೊಳಗೆ ಇಳಿಯುವ ಕೆಲವೇ ನಿಮಿಷಗಳ ಮುನ್ನ ಬಿಹಾರ ಮೂಲದ ಬ್ರಜೇಶ್ ಕುಮಾರ್ ತನ್ನ ಮಕ್ಕಳೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದರು. ಮಾತು ಮುಗಿಸಿ ಮೊಬೈಲನ್ನು ತನ್ನ ಸ್ನೇಹಿತರ ಕೈಗೆ ನೀಡಿ, ಇಂಜಿನಿಯರ್ ಜೊತೆ ಕೆಳಗೆ ಇಳಿದಿದ್ದರು. ಆದರೆ, ಇಳಿದ ಕೆಲವೇ ಕ್ಷಣಗಳಲ್ಲಿ ನೀರು ಪಾಲಾಗಿರುವುದು ದುರಂತದ ಸಂಗತಿ.
ಮುಂದುವರಿದ ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಕಾರ್ಯಾಚರಣೆ:
ಘಟನೆ ನಡೆದ ತಕ್ಷಣ ವರ್ತೂರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ (NDRF) ತಂಡ ಕೂಡ ಆಗಮಿಸಿದ್ದು, ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದೆ. ಜಲಮಂಡಳಿ ಸಿಬ್ಬಂದಿ ಈಗಾಗಲೇ ಟ್ಯಾಂಕ್‌ನಲ್ಲಿದ್ದ ನೀರನ್ನು ಹೊರಹಾಕಿದ್ದಾರೆ. ಆದರೂ ಕೊಳಚೆ ನೀರು ಹರಿದು ಬರುತ್ತಲೇ ಇರುವುದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಕ್ಲೈನ್ ಮೂಲಕ ತ್ಯಾಜ್ಯ ನಿರ್ವಹಣ ಘಟಕದ ಒಳಗೆ 4 ಸಿಬ್ಬಂದಿ ಇಳಿದಿದ್ದಾರೆ. ವಿಷ ಅನಿಲದ ಕಾರಣ ಕೆಲ ಕಾಲ ಇಳಿದಿರಲಿಲ್ಲ.
ಟ್ಯಾಂಕರ್ ಒಳಗಡೆ ಸುಮಾರು 10 ಅಡಿಯಷ್ಟು ಕೊಳಚೆ ನೀರು ಮತ್ತು ಕೆಸರು ಸಂಗ್ರಹವಾಗಿದ್ದು, ಇಲ್ಲಿಂದ ದೊಡ್ಡ ಪೈಪ್ ಮೂಲಕ ನೀರು ಹರಿದು ಫಿಲ್ಟರ್ ಆಗುವ ಪಾಯಿಂಟ್‌ಗೆ ತಲುಪುತ್ತದೆ. ಈ ಫಿಲ್ಟರ್ ಪಾಯಿಂಟ್‌ನಲ್ಲಿ ಘನತ್ಯಾಜ್ಯವನ್ನು ಬೇರ್ಪಡಿಸುವ ದೊಡ್ಡ ಚಕ್ರಗಳು (ಬ್ಲೇಡ್‌ಗಳು) ನಿರಂತರವಾಗಿ ತಿರುಗುತ್ತಿರುತ್ತವೆ. ಒಂದು ವೇಳೆ ಮೃತದೇಹಗಳು ಈ ಚಕ್ರಗಳಿಗೆ ಸಿಲುಕಿದ್ದರೆ ದೇಹ ತುಂಡಾಗುವ ಭೀತಿಯೂ ಎದುರಾಗಿದೆ. ಕಳೆದ ಹಲವು ಗಂಟೆಗಳಿಂದ ನಿರಂತರ ಹುಡುಕಾಟ ನಡೆಸುತ್ತಿದ್ದರೂ ಇನ್ನು ಯಾವುದೇ ಸುಳಿವು ಸಿಕ್ಕಿಲ್ಲ. ಕೆಸರಿನಲ್ಲಿ ಮೃತದೇಹಗಳು ಸಿಲುಕಿರುವ ಶಂಕೆ ಇದ್ದು, ಎನ್‌ಡಿಆರ್‌ಎಫ್ ಸಿಬ್ಬಂದಿ 40 ಅಡಿ ಆಳಕ್ಕೆ ಇಳಿದು ಸಾಹಸದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಜಲಮಂಡಳಿ ಅಧ್ಯಕ್ಷರ ಭೇಟಿ:
ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ಜಲಮಂಡಳಿ ಅಧ್ಯಕ್ಷೆ ಮಂಜುಳಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಿದ ಅವರು, ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಸದ್ಯ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.


