ಕೊಪ್ಪಳ(ಮೇ.20): ನಗರದ ಶ್ರೀ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆ ಮತ್ತು ಕೇರ್‌ ಸೆಂಟರ್‌ನಲ್ಲಿ ತರಹೇವಾರಿ ಭೋಜನ ಮತ್ತು ಪಾನೀಯಗಳನ್ನು ನೀಡಿ ಆರೈಕೆ ಮಾಡಲಾಗುತ್ತಿದೆ. ನಾನಾ ಬಗೆಯ ಆಟ ಮತ್ತು ಬಗೆ ಬಗೆಯ ಭೋಜನದಿಂದ ಸೋಂಕಿತರು ಬೇಗನೆ ಗುಣಮುಖವಾಗುತ್ತಿದ್ದಾರೆ. ಅರ್ಧ ಔಷಧಿ ಕೆಲಸ ಮಾಡಿದರೆ ಇನ್ನರ್ಧ ಆಟ-ಊಟ ಹಾಗೂ ಉಪನ್ಯಾಸ, ಯೋಗ ಗುಣಪಡಿಸುತ್ತಿದೆ.

ಏನೇನು?:

ಬೆಳಗ್ಗೆ ಕಷಾಯ, ಚಹ, ಬಿಸ್ಕಿಟ್‌ ಹಾಗೂ ಸಕ್ಕರೆ ಕಾಯಿಲೆ ಇರುವವರಿಗೆ ರಾಗಿ ಗಂಜಿ ನೀಡಲಾಗುತ್ತದೆ. ಸಂಜೆಯೂ ಇರುತ್ತದೆ. ಅವರಿವರು ತಂದು ಕೊಡುವ ಹಣ್ಣು, ವಾರಪೂರ್ತಿ ನಿತ್ಯವೂ ಭಿನ್ನ ಭಿನ್ನ ಉಪಾಹಾರ ನೀಡಲಾಗುತ್ತದೆ. ನಿತ್ಯವೂ ಬೆಳಗ್ಗೆ ಬೇರೆ ಬೇರೆ ತಿಂಡಿಯಾಗಿ ರವೆ ಇಡ್ಲಿ, ಇಡ್ಲಿ, ಉಪ್ಪಿಟ್ಟು, ಟೊಮೆಟೋ ಬಾತ್‌ ನೀಡಲಾಗುತ್ತದೆ. ಮಧ್ಯಾಹ್ನ ಚಪಾತಿ, ರೊಟ್ಟಿ, ಬದನೆಕಾಯಿ ಪಲ್ಯ, ಅನ್ನ ಸಾಂಬರ್‌, ಉಪ್ಪಿನಕಾಯಿ, ಹಿರೇಕಾಯಿ ಪಲ್ಯ, ಆಲೂಗಡ್ಡೆ ಪಲ್ಯೆ, ಮಿಕ್ಸ್‌ ಭಾಜಿ, ಬೀನ್ಸ್‌ ಪಲ್ಯೆ, ಎಲೆಕೋಸು ಪಲ್ಯ ಇರುತ್ತದೆ. ರಾತ್ರಿ ವೇಳೆ ಫೈನಾಪಲ್‌ ಸೀರಾ, ಫಲಾವ್‌, ಸಜ್ಜಕಾ, ಹೆಸರು ಬೇಳೆ ಪಾಯಸ, ಬಿಸಿಬೇಳೆ ಬಾತ್‌, ಜೀರಾ ರೈಸ್‌, ಪೊಂಗಲ್‌, ಪುಳಿಯೊಗರೆ, ಟೊಮೆಟೋ ರೈಸ್‌ ಇರುತ್ತದೆ.

"

ಇಲ್ಲಿ ಕೇವಲ ಚಿಕಿತ್ಸೆ ನೀಡುತ್ತಿಲ್ಲ, ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್‌, ನಾನಾ ಆಟಗಳನ್ನು ಆಡಿಸುವುದರಿಂದ ಆಸ್ಪತ್ರೆಯ ವಾತಾವರಣವೇ ಬೇರೆಯಾಗಿದೆ. ಹೀಗಾಗಿ, ಸೋಂಕಿತರು ಬೇಗನೆ ಗುಣಮುಖವಾಗುತ್ತಿದ್ದಾರೆ ಎಂದು  ಡಾ. ಮಹೇಶ ಎಚ್‌ ತಿಳಿಸಿದ್ದಾರೆ.

ಕೊಪ್ಪಳ ಗವಿಮಠದಿಂದ ಸುಸಜ್ಜಿತ ಕೋವಿಡ್‌ ಆಸ್ಪತ್ರೆ ಶುರು

ಆಸ್ಪತ್ರೆಯಲ್ಲಿನ ಮತ್ತು ಆರೈಕೆ ಕೇಂದ್ರದಲ್ಲಿನ ರೋಗಿಗಳಿಗೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸೂಚನೆಯಂತೆ ನಾನಾ ರೀತಿಯ ಆಹಾರ ನೀಡಲಾಗುತ್ತದೆ. ವಿಶೇಷ ನಿಗಾ ವಹಿಸಲಾಗಿದೆ ಎಂದು ಆಹಾರದ ಉಸ್ತುವಾರಿ ರಾಮನಗೌಡ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona