*  ಇದು ಆರೋಗ್ಯ ಇಲಾಖೆಯ ಎಡವಟ್ಟು*  2ನೇ ಲಸಿಕೆ ಪಡೆಯುವ ಮುನ್ನವೇ ಸಕ್ಸಸ್‌ ಫುಲ್‌ ಡೋಸ್‌*  ಪ್ರಮಾಣಪತ್ರ ಸಹ ಡೌನ್‌ಲೋಡ್‌ 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಸೆ.02): ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತ ಸದ್ಯ ಮಂಗಳೂರಿನಲ್ಲಿರುವ ಬಸವರಾಜ ತಳ್ಳಿ ಎಂಬವರಿಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಲೇದಗುಡ್ಡ ಗ್ರಾಮದ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದಲ್ಲಿ ಬುಧವಾರ ಲಸಿಕೆ ನೀಡಲಾಗಿದೆ. 

ಈ ಕುರಿತು ಅವರಿಗೆ ಮೊಬೈಲ್‌ ಸಂದೇಶ ಬಂದಿದೆ. ಆರೋಗ್ಯ ಇಲಾಖೆಯ ಎಡವಟ್ಟಿನಿಂದ ಅವರು ಕಂಗಾಲಾಗಿದ್ದಾರೆ. ನನಗೆ ಎರಡನೇ ಡೋಸ್‌ ನೀಡಲಾಗಿಲ್ಲ. ಆದರೂ ಮೆಸೇಜ್‌ ಬಂದಿದೆ, ಪ್ರಮಾಣಪತ್ರ ಸಹ ಡೌನ್‌ಲೋಡ್‌ ಆಗಿದೆ. ಎರಡನೇ ಡೋಸ್‌ನಿಂದ ವಂಚಿತನಾಗಬಹುದೇ ಎಂಬ ಆತಂಕದಲ್ಲಿದ್ದಾರೆ ಅವರು.

ಆಗಿದ್ದೇನು?:

ಮಂಗಳೂರಿನಲ್ಲಿರುವ ಬಸವರಾಜನಿಗೆ ನಿಮ್ಮ ಎರಡನೇ ಡೋಸ್‌ ವ್ಯಾಕ್ಸಿನೇಷನ್‌ ಸಕ್ಸಸ್‌ಫುಲ್‌ ಆಗಿದೆ ಎಂಬ ಸಂದೇಶ ಬಂದಿದೆ. ಬಂದ ಸಂದೇಶ ಆಧರಿಸಿ ಪ್ರಮಾಣ ಪತ್ರ ಡೌನ್‌ಲೋಡ್‌ ಮಾಡಿಕೊಂಡಾಗ ಹುಲೇದಗುಡ್ಡದಲ್ಲಿ ಲಸಿಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ನಾನು ಮಂಗಳೂರಿನಲ್ಲಿದ್ದು ಇದ್ಹೇಗೆ ಲಸಿಕೆ ಪಡೆಯಲು ಸಾಧ್ಯವೆಂದು ಚಕಿತರಾಗಿದ್ದಾರೆ.

ನೀವೂ ಕೋವಿಡ್ ಲಸಿಕೆ ಮೂರನೇ ಡೋಸ್ ತೆಗೆದುಕೊಳ್ಳಬೇಕೇ?

ಯಾಕೇ ಹೀಗೆ ಆಯಿತು?:

ಬಸವರಾಜ ಲಾಕ್‌ಡೌನ್‌ ವೇಳೆ ಕುಟುಂಬ ಸಮೇತ ಯಲಬುರ್ಗಾ ತಾಲೂಕಿನ ಮಾಟರಂಗಿಯಲ್ಲಿ (ಪತ್ನಿಯ ಮನೆ) ವಾಸವಾಗಿದ್ದರು. ಆಗ ಹುಲೇದಗುಡ್ಡ ಉಪ ಕೇಂದ್ರದಲ್ಲಿ ಮೊದಲ ಡೋಸ್‌ ಲಸಿಕೆ ಪಡೆದಿದ್ದರು. ಈಗ ಎರಡನೇ ಡೋಸ್‌ ಹಾಕಿಸುವ ಸಮಯ ಬಂದಿದ್ದು ಮಂಗಳೂರಿನಲ್ಲಿ ಇರುವುದರಿಂದ ಅಲ್ಲಿಯೇ ಹಾಕಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಬುಧವಾರ ಅವರ ಹೆಸರಿನಲ್ಲಿ ಲಸಿಕೆ ಪಡೆದಿರುವ ಸಂದೇಶ ಬಂದಿದೆ.

ಹಾಕಿದ್ದಾದರೂ ಹೇಗೆ?:

ಮೊದಲ ಅಥವಾ ಎರಡನೇ ಡೋಸ್‌ ಲಸಿಕೆ ಪಡೆಯುವ ಮುನ್ನ ಗುರುತಿನ ಚೀಟಿಯನ್ನು ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಅದು ಸಮ್ಮತಿಯಾದ ಬಳಿಕವೇ ಲಸಿಕೆ ಹಾಕಲಾಗುತ್ತದೆ. ಮಂಗಳೂರಿನಲ್ಲಿರುವ ಬಸವರಾಜ ಅವರ ಹೆಸರಿನಲ್ಲಿ ಇಲ್ಲಿ ಹೇಗೆ ಲಸಿಕೆ ಹಾಕಲಾಯಿತು? ಅವರ ಆಧಾರ್‌ ಕಾರ್ಡ್‌ ತಂದುಕೊಟ್ಟವರು ಯಾರು? ಹೇಗೆ ಅಪ್‌ಲೋಡ್‌ ಮಾಡಲಾಯಿತು? ಎನ್ನುವ ಪ್ರಶ್ನೆಗಳಿಗೆ ಆರೋಗ್ಯ ಇಲಾಖೆಯೇ ಉತ್ತರ ನೀಡಬೇಕಾಗಿದೆ.

ನಾನು ಮಂಗಳೂರಿನಲ್ಲಿದ್ದರೂ ನನ್ನ ಹೆಸರಿನಲ್ಲಿ ಹುಲೇದಗುಡ್ಡ ಉಪಕೇಂದ್ರದಲ್ಲಿ ಬುಧವಾರ ಲಸಿಕೆ ಹಾಕಿದ ಮಾಹಿತಿ ಮೊಬೈಲ್‌ಗೆ ಬಂದಿದ್ದು ಪ್ರಮಾಣ ಪತ್ರ ಡೌನ್‌ಲೋಡ್‌ ಮಾಡಿಕೊಂಡಿದ್ದೇನೆ. ನನ್ನ ಹೆಸರಿನಲ್ಲಿ ಯಾರು ಲಸಿಕೆ ಹಾಕಿಸಿಕೊಂಡರು? ನಾನು ಈಗ ಎರಡನೇ ಡೋಸ್‌ ಹಾಕಿಸಿಕೊಳ್ಳವುದು ಹೇಗೆ? ಇದಕ್ಕೆ ಯಾರು ಹೊಣೆ?. ಇದನ್ನು ಕೇಳಿದರೆ ಅಲ್ಲಿಯ ಸಿಬ್ಬಂದಿ ಸರಿಯಾಗಿ ಉತ್ತರಿಸುತ್ತಿಲ್ಲ ಎಂದು ಮಂಗಳೂರಿನಲ್ಲಿರುವ ಚಾಲಕ ಬಸವರಾಜ ತಳ್ಳಿ ತಿಳಿಸಿದ್ದಾರೆ. 

ಬಸವರಾಜ ಅವರು ಪೋನ್‌ ಮಾಡಿದ್ದು, ನೀವು ಬಂದರೆ ಎರಡನೇ ಲಸಿಕೆ ಹಾಕುತ್ತೇವೆ ಎಂದು ಹೇಳಿದ್ದೇವೆ. ಇದು ಹೇಗೆ ಆಗಿದೆಯೋ ಗೊತ್ತಿಲ್ಲ ಎಂದು ಹುಲೇದಗುಡ್ಡದ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ರಜೀಯಾಬೇಗಂ ತಿಳಿಸಿದ್ದಾರೆ.