ಬೆಂಗಳೂರು (ಅ. 02) ಉತ್ತರ ಕರ್ನಾಟಕ ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ತಾಳಿರುವ ತಾರತಮ್ಯ ಧೋರಣೆ ವಿರೋಧಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ  ಬೆಂಗಳೂರಿನಲ್ಲಿ ಅಕ್ಟೋಬರ್ 3  ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ಗುರುವಾರ ಮುಂಜಾನೆ 9.30ಕ್ಕೆ ರಾಜಾಜಿನಗರದ ಬಾಷ್ಯಂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅಲ್ಲಿಂದ ರಾಮಮಂದಿರ ಮಾರ್ಗವಾಗಿ ಫ್ರೀಡಂ ಪಾರ್ಕವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ  ಶಂಕರ್ ಬಿದರಿ ಪ್ರತಿಭಟನೆಗೆ ಚಾಲನೆ ನೀಡಲಿದ್ದಾರೆ ಎಂದು ಮಹಾ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮೇಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೆರೆ ಪರಿಹಾರ ಕೇಳಿದ್ರೆ ಮೋದಿ ಸರ್ಕಾರ ಬೇಕೆಂದು ಓಟು ಹಾಕಿದ್ದೀರಿ, ಸ್ವಲ್ಪ ಕಾಯಿರಿ ಎಂದು ಬಿಜೆಪಿ MP

ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಪ್ರವಾಹದಿಂದ ಜನ ತತ್ತರಿಸಿದ್ದಾರೆ. ಮನೆ- ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಬದುಕು ಬರ್ಬರವಾಗಿದೆ. ಆದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡಿಗಾಸೂ ನೀಡಿಲ್ಲ. ನೆರೆ ಪೀಡಿತರ ಕಣ್ಣೀರು ಒರೆಸುವ ಪ್ರಯತ್ನ ಮಾಡಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಉತ್ತರ ಭಾರತದ ಬಿಹಾರದಲ್ಲಿ ಉಂಟಾದ ಪ್ರವಾಹಕ್ಕೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿದೆ. ನೆರವು ನೀಡುವ ಭರವಸೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ. ಆದರೆ ಕರ್ನಾಟಕವನ್ನು ಸಂಪೂರ್ಣವಾಗಿ ಮರೆತು ಹೋಗಿದ್ದಾರೆ ಎಂದು ಸಂಘಟನೆ ಹೇಳಿದೆ.

ಸವಾರರರಿಗೆ ಎಚ್ಚರಿಕೆ: ಪ್ರತಿಭಟನೆ ನಡೆಯಲಿರುವುದರಿಂದ ಸಹಜವಾಗಿಯೇ ರಾಜಾಜಿನಗರ, ಮೆಜೆಸ್ಟಿಕ್, ಗಾಂಧಿ ನಗರ, ಫ್ರೀಡಂ ಪಾರ್ಕ್ ಸುತ್ತ ಮುತ್ತ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಳ್ಳಬಹುದು. ವಾಹನ ಸವಾರರು ಈ ಪ್ರದೇಶದ ಸುತ್ತಮುತ್ತಲಿನ ಮಾರ್ಗಗಳ ಬದಲು ಬೇರೆ ರಸ್ತೆ ಬಳಸುವುದು ಉತ್ತಮ.