Uttara Kannada: ಸೋಡಿಗದ್ದೆ ಮಹಾಸತಿ ದೇವಿ ಜಾತ್ರೆ: ಕೆಂಡ ಹಾಯ್ದು ಹರಕೆ ತೀರಿಸಿದ ಭಕ್ತರು

ಭಟ್ಕಳ ತಾಲೂಕಿನ ಪ್ರಸಿದ್ಧ ಸೋಡಿಗದ್ದೆ ಮಹಾಸತಿ ದೇವಿಯ ಜಾತ್ರೆಯ ಅಂಗವಾಗಿ ಇಂದು ವಿಶೇಷ ಕೆಂಡ ಸೇವೆ ಜರಗಿತು. ಸಾವಿರಾರು ಭಕ್ತರು ಕೆಂಡ ಸೇವೆಗೈದು ದೇವರಿಗೆ ಹರಕೆ ಒಪ್ಪಿಸಿದರು. 

Uttara Kannada Sodigadde Mahasati Devi Fair Devotees make merry sat

ವರದಿ- ಭರತ್‌ರಾಜ್‌ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್

ಉತ್ತರಕನ್ನಡ (ಜ.24): ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಸೋಡಿಗದ್ದೆ ಮಹಾಸತಿ ದೇವಿಯ ಜಾತ್ರೆಯ ಅಂಗವಾಗಿ ಇಂದು ವಿಶೇಷ ಕೆಂಡ ಸೇವೆ ಜರಗಿತು. ಸಾವಿರಾರು ಭಕ್ತರು ಕೆಂಡ ಸೇವೆಗೈದು ದೇವರಿಗೆ ಹರಕೆ ಒಪ್ಪಿಸಿದರು. 

ಬೆಳಗ್ಗೆ 11:30 ಗಂಟೆಗೆ ಆರಂಭವಾದ ಕೆಂಡ ಸೇವೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಚಿಕ್ಕ ಮಕ್ಕಳನ್ನು ಪೂಜಾರಿಗಳು ಹಾಗೂ ಪೋಷಕರು ಎತ್ತಿಕೊಂಡು ಕೆಂಡ ಹಾಯ್ದರೆ, ಹಲವಾರು ಭಕ್ತರು ಕೆಂಡದ ಮೇಲೆ ನಡೆದು ತಮ್ಮ ಹರಕೆ ತೀರಿಸಿದರು. ಜಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿ ಮಹಾಸತಿ ಅಮ್ಮನವರ ದರ್ಶನ ಪಡೆದರು. ಪೂಜಾರಿಯವರ ಮೇಲೆ ದೇವಿ ಆಹ್ವಾಹನೆ ಆಗೋದನ್ನು ನೋಡಿದ ಜನರು ಮತ್ತಷ್ಟು ಭಕ್ತಿ ಭಾವಪರವಶಗೊಂಡರು. 

ವಿಜಯಪುರ ಸಿದ್ದರಾಮೇಶ್ವರ ಜಾತ್ರೆ: ಕಂಕಣ ಭಾಗ್ಯ ಕರುಣಿಸುವ ನಂದಿಕೋಲು

ಈ ಜಾತ್ರೆಯ ಸಂದರ್ಭದಲ್ಲಿ ಹೂವಿನ ಪೂಜೆ, ಬಂಗಾರದ ತೊಟ್ಟಿಲು ಸಮರ್ಪಣೆ, ಬೆಳ್ಳಿ, ಬಂಗಾರದ ಕಣ್ಣು, ಬಂಗಾರದ ಆಭರಣ ಇತ್ಯಾದಿಗಳನ್ನು ಭಕ್ತಿ ಪೂರ್ವಕವಾಗಿ ದೇವಿಗೆ ಸಮರ್ಪಿಸುವ ಕಾರ್ಯ ಕೂಡಾ ಭಕ್ತರಿಂದ ನಡೆಯುತ್ತದೆ. ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಈ ಜಾತ್ರೆಯಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಕಾಣದ ಭಕ್ತಾಧಿಗಳು ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. 

ಪ್ರತಿ ವರ್ಷದಂತೆ ದಕ್ಷಿಣಕನ್ನಡ ಜಿಲ್ಲೆಯ ಭಕ್ತರು ಎತ್ತಿನ ಗಾಡಿ ಶೃಂಗರಿಸಿ, ತಮ್ಮ ಹರಕೆ ತೀರಿಸಿದರಲ್ಲದೇ, ಜಾತ್ರೆಗೆ ಸಾಂಪ್ರದಾಯಿಕ ಮೆರುಗು ತಂದರು. ಜಾತ್ರೆಯಲ್ಲಿ ಯಾವುದೇ ಅನಾಹುತವಾಗದಂತೆ ತಡೆಯುವ ಸಲುವಾಗಿ, ದೇವಸ್ಥಾನ ಅಭಿವೃದ್ಧಿ ಸಮಿತಿ, ಇಲಾಖಾ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಪೊಲೀಸರು ಸುಸಜ್ಜಿತ ಭದ್ರತಾ ವ್ಯವಸ್ಥೆ ಕಲಿಸಿದ್ದರು.
 

Latest Videos
Follow Us:
Download App:
  • android
  • ios