ಬಳಸಿದ ವಸ್ತು ದೇವರಿಗೆ ಅರ್ಪಿಸುತ್ತಾರೆ.. ಒಂದು ಕಡೆಯಿಂದ ಇನ್ನೊಂದು ಕಡೆ.. ಕಾರವಾರದ ಆಚರಣೆ!

* ಇದೊಂದು ಅಪರೂಪದ ಆಚರಣೆ
* ಉತ್ತರ ಕನ್ನಡ ಜಿಲ್ಲೆಯಲ್ಲಿನ ಆಚರಣೆ
* ಮಾರಿಹೊರೆ ದಾಟಿಸುವ ಹರಕೆ
* ಒಂದು ಸೀಮೆಯಿಂದ ಇನ್ನೊಂದು ಸೀಮೆಗೆ

Used things submit to goddess unique religious practice in Uttara Kannada mah

ವರದಿ: ಭರತ್‌ರಾಜ್ ಕಲ್ಲಡ್ಕ, ಕಾರವಾರ

ಕಾರವಾರ(ಏ. 01)   ಜನರಿಗೆ (People) ಕಷ್ಟಗಳು, ಸಮಸ್ಯೆಗಳು ಎದುರಾದಾಗ ದೇವರನ್ನು(God) ನೆನೆದು ವಿವಿಧ ರೀತಿಯ ಹರಕೆಗಳನ್ನು ಸಲ್ಲಿಸುವುದು ಸಾಮಾನ್ಯ. ಸೀರೆ, ಗಂಟೆ, ಆಭರಣ, ಹೂವು-ಹಣ್ಣು, ವಿವಿಧ ಪೂಜೆ, ಅನ್ನಸಂತರ್ಪಣೆಯಂತಹ ಸೇವೆಗಳನ್ನು ಹರಕೆಯಾಗಿ ದೇವರಿಗೆ ಸಲ್ಲಿಸಲಾಗುತ್ತದೆ. ಆದರೆ, ಇಲ್ಲೊಂದು ಕಡೆ ಮಾತ್ರ ಮನೆಯಲ್ಲಿ ಉಪಯೋಗಿಸಿದಂತಹ ವಸ್ತುಗಳನ್ನು ದೇವರಿಗೆ ಹರಕೆಯಾಗಿ ಸಲ್ಲಿಸುವ ಪದ್ಧತಿ ರೂಢಿಯಲ್ಲಿದೆ. ಅಷ್ಟಕ್ಕೂ, ಇಂತಹದ್ದೊಂದು ಪದ್ಧತಿ ಆಚರಣೆಯಲ್ಲಿ ಇರೋದಾದ್ರೂ ಎಲ್ಲಿ..? ಅದಕ್ಕೆ ಕಾರಣವಾದ್ರೂ ಏನು ಅಂತೀರಾ...ಈ ಸ್ಟೋರಿ ನೋಡಿ... 

ಒಂದೆಡೆ ಸಣ್ಣದಾದ ಗುಡಿಯಂತಿರುವ ದೇವಸ್ಥಾನದ ಹೊರಗೆ ಹಾಕಿರುವ ರಾಶಿ ರಾಶಿ ಕಸಗಳು. ಇನ್ನೊಂದೆಡೆ ಅದೇ ದೇವರಿಗೆ ಭಕ್ತಿಯಿಂದ ನಮಸ್ಕರಿಸಿ ಉಪ್ಪಿನ ಪೊಟ್ಟಣವನ್ನು ಅರ್ಪಿಸಿ ತೆರಳುತ್ತಿರುವ ಭಕ್ತರು. ಮತ್ತೊಂದೆಡೆ ದೇವಸ್ಥಾನದ ಬಳಿಕ ಸಂಗ್ರಹವಾಗಿದ್ದ ಕಸವನ್ನು ಲಾರಿಗಳಲ್ಲಿ ತುಂಬಿ ಸಾಗಿಸುತ್ತಿರುವ ಜನರು. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ (Uttara Kannada) ಜಿಲ್ಲೆಯ ಕಾರವಾರ ನಗರದಲ್ಲಿ. 

ಅಷ್ಟಕ್ಕೂ ದೇವಸ್ಥಾನದ ಬಳಿಕ ರಾಶಿ ರಾಶಿಯಾಗಿ ಸಂಗ್ರಹವಾಗಿರುವುದು ಯಾವುದೋ ಕಸವಲ್ಲ. ಬದಲಿಗೆ ಜನರು ದೇವರಿಗೆ ಹರಕೆ ರೂಪದಲ್ಲಿ ಸಲ್ಲಿಸಲಾಗಿರುವ ಮಾರಿ ಹೊರೆ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತದ (South India) ಜಾಗೃತ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಶಕ್ತಿ ದೇವತೆಗಳಲ್ಲಿ ಒಂದೆನಿಸಿದ್ದು, ಈ ದೇವರಿಗೆ ಯಾವುದೇ ಹರಕೆ ಹೊತ್ತುಕೊಂಡಲ್ಲಿ ಅದು ಈಡೇರುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಅದರಂತೆ ಗಡಿ ಮಾರಿ ಅಥವಾ ಸೀಮೆ ಮಾರಿ ಎಂದು ಕರೆಯಲ್ಪಡುವ ದೇವಿಗೆ ಹರಕೆ ಸಲ್ಲಿಸುವುದು ಪ್ರತಿಯೊಂದು ಗ್ರಾಮದಲ್ಲಿ ಆಚರಣೆಯಲ್ಲಿದೆ. ತಮಗೆ ಎದುರಾಗಿರುವ ಸಂಕಷ್ಟಗಳು, ರೋಗ ರುಜಿನಗಳು ದೂರಾಗಲಿ ಎಂದು ಹರಕೆಯನ್ನು ಹೊತ್ತುಕೊಳ್ಳಲಾಗುತ್ತದೆ. ಅದರಂತೆ ತಾವು ಉಪಯೋಗಿಸಿದ ಬಟ್ಟೆ, ಬಳೆ, ತೊಟ್ಟಿಲು ಸೇರಿದಂತೆ ಮನೆಯಲ್ಲಿನ ವಸ್ತುವೊಂದನ್ನು ತಂದು ಗ್ರಾಮದ ಸೀಮೆಯಲ್ಲಿರುವ ಮಾರಿ ದೇವರ ಬಳಿ ಇಟ್ಟು ಹೋಗುತ್ತಾರೆ. ಹೀಗೆ ಮನೆಯಲ್ಲಿ ಉಪಯೋಗಿಸಲ್ಪಟ್ಟ ವಸ್ತುವನ್ನು ಹರಕೆ ರೂಪದಲ್ಲಿ ಸಲ್ಲಿಸಿದರೆ ತಮ್ಮ ಕಷ್ಟಗಳು ಅವುಗಳ ಮೂಲಕ ದೂರಾಗುತ್ತವೆ ಎನ್ನುವ ನಂಬಿಕೆಯಿದ್ದು, ಹೀಗೆ ಸಂಗ್ರಹವಾದ ಹರಕೆಯ ವಸ್ತುಗಳನ್ನು ವರ್ಷಕ್ಕೊಮ್ಮೆ ಆಯಾ ಗ್ರಾಮಸ್ಥರು ತಮ್ಮ ಗ್ರಾಮದ ಸೀಮೆಯಿಂದ ಪಕ್ಕದ ಗ್ರಾಮದ ಸೀಮೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ.

ಕಾರವಾರ ಬಂದರು ವಿಸ್ತರಣೆಗೆ ಸುಪ್ರೀಂ ತಾತ್ಕಾಲಿಕ ಬ್ರೇಕ್‌

ಇನ್ನು ಈ ಮಾರಿಹೊರೆ ಪ್ರತಿವರ್ಷ ಶಿರಸಿಯಿಂದ ಆರಂಭವಾಗಿ ಗ್ರಾಮದಿಂದ ಗ್ರಾಮಕ್ಕೆ ಸ್ಥಳಾಂತರವಾಗುತ್ತಾ ಸಾಗುತ್ತದೆ. ಆಯಾ ಗ್ರಾಮಗಳು ತಮ್ಮ ಸೀಮೆಯಿಂದ ನೆರೆಯ ಗ್ರಾಮದ ಸೀಮೆಗೆ ಮಾರಿ ಹೊರೆಯನ್ನು ದಾಟಿಸುತ್ತಾರೆ. ಹೀಗೆ ಬರುವ ಮಾರಿ ಹೊರೆ ಕಾರವಾರದ ಗೀತಾಂಜಲಿ ಚಿತ್ರಮಂದಿರ ಬಳಿಯಿರುವ ಮಾರಿದೇವಿ ದೇವಸ್ಥಾನದ ಬಳಿ ಸಂಗ್ರಹವಾಗುತ್ತದೆ. ವರ್ಷಕ್ಕೆ ಒಂದರಿಂದ ಎರಡು ಬಾರಿ ಹೀಗೆ ಸಂಗ್ರಹವಾಗುವ ಮಾರಿ ಹೊರೆಯನ್ನು ತಾಲ್ಲೂಕಿನ 18 ಗ್ರಾಮಗಳ ವಿವಿಧ ಸಮುದಾಯದವರು ಸೇರಿಕೊಂಡು ವಾಹನದಲ್ಲಿ ತುಂಬಿ ಮುಂದಿನ ಗ್ರಾಮದ ಸೀಮೆಗೆ ಕಳುಹಿಸಿಕೊಡುತ್ತಾರೆ. 

ಈ ಮಾರಿಹೊರೆಯನ್ನು ಕಳುಹಿಸಿಕೊಡುವವರೆಗೆ ಗ್ರಾಮದಲ್ಲಿ ಯಾವುದೇ ರೀತಿಯ ಉತ್ಸವ, ಜಾತ್ರೆಗಳಂತಹ ಕಾರ್ಯಗಳನ್ನು ಮಾಡುವಂತಿಲ್ಲ. ಇನ್ನು ಇಲ್ಲಿನ ಮಾರಿ ದೇವಿಗೆ ಉಪ್ಪಿನ ಹರಕೆ ನೀಡುವ ಆಚರಣೆಯಿದ್ದು, ಚರ್ಮ ಸಂಬಂಧಿ ಸಮಸ್ಯೆ ಎದುರಿಸುತ್ತಿರುವವರು ಈ ದೇವರಿಗೆ ಬೇಡಿಕೊಂಡು ಉಪ್ಪು ನೀಡಿದಲ್ಲಿ ಅವರ ಚರ್ಮ ರೋಗ ಗುಣವಾಗುತ್ತದೆ ಎನ್ನುವ ನಂಬಿಕೆಯಿದೆ. ತಲೆತಲಾಂತರಗಳಿಂದ ಈ ಆಚರಣೆ ನಡೆದುಕೊಂಡು ಬರುತ್ತಿದ್ದು, ಕಳೆದೆರಡು ವರ್ಷ ಕೊರೊನಾ ಕಾರಣದಿಂದಾಗಿ ಮಾರಿ ಹೊರೆ ಸಂಗ್ರಹವಾಗಿರಲಿಲ್ಲ. ಈ ಬಾರಿ ಬರೋಬ್ಬರಿ ಮೂರು ಲಾರಿಯಷ್ಟು ಮಾರಿಹೊರೆ ಸಂಗ್ರಹವಾಗಿದ್ದು, ಎಲ್ಲ ಸಮುದಾಯಗಳು ಸೇರಿಕೊಂಡು ಅದನ್ನು ಮುಂದಿನ ಗ್ರಾಮದ ಸೀಮೆಗೆ ಕಳುಹಿಸಿಕೊಟ್ಟಿದ್ದಾರೆ. 

ಒಟ್ಟಿ‌ನಲ್ಲಿ ಕಷ್ಟ ಕಾರ್ಪಣ್ಯಗಳನ್ನು ಕಳೆದುಕೊಳ್ಳಲು ಜನರ ನಂಬಿಕೆಯನುಸಾರ ಉತ್ತರಕನ್ನಡ ಜಿಲ್ಲೆಯಲ್ಲಿ ಮಾರಿ ಹೊರೆ ಅರ್ಪಿಸುವ ಪದ್ಧತಿ ನಡೆದುಕೊಂಡು ಬಂದಿದ್ದು, ಬಳಕೆ ಮಾಡಿದ ವಸ್ತುಗಳನ್ನು ದೇವರಿಗೆ ಹರಕೆಯಾಗಿ ನೀಡುವ ಈ ಪದ್ಧತಿ ವಿಶೇಷವೇ ಸರಿ. 

 

 

 


 

Latest Videos
Follow Us:
Download App:
  • android
  • ios