ತುಮಕೂರು/ಚಿತ್ರದುರ್ಗ (ಸೆ.08): ಸಮರ್ಪಕವಾಗಿ ಯೂರಿಯಾ ರಸಗೊಬ್ಬರ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿ ತುಮಕೂರು ಹಾಗೂ ಚಿತ್ರದುರ್ಗದ ಹೊಸದುರ್ಗದಲ್ಲಿ ರೈತರು ಸೋಮವಾರ ಬೀದಿಗಿಳಿದು ಹೋರಾಟ ನಡೆಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೈಗೆ ಬಂದ ತುತ್ತು ಬಾಯಿಗಿಲ್ಲ : ಕಂಗಾಲಾದ ಅನ್ನದಾತ ..

ತುಮಕೂರಿನ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಕೃಷಿ ಇಲಾಖೆಯ ಅಧಿಕಾರಿಗಳು ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರಗಳ ಜೊತೆ ಸೇರಿ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಯೂರಿಯಾ ಸಿಗದಂತೆ ಮಾಡಿದ್ದಾರೆ. ಕಾಳಸಂತೆಕೋರರು ತಮಗೆ ಇಷ್ಟಬಂದ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಡಳಿತ ದುಪ್ಪಟ್ಟು ಬೆಲೆ ಪಡೆಯುತ್ತಿರುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗೊಬ್ಬರ ತುಂಬಿದ ಲಾರಿ ತಡೆದು ಪ್ರತಿಭಟನೆ:

ಯೂರಿಯಾಗಾಗಿ ಹೊಸದುರ್ಗ ತಾಲೂಕಿನಲ್ಲಿ ರೈತರ ಪರದಾಟ ಮುಂದುವರಿದಿದ್ದು, ಬೇಸತ್ತ ರೈತರು ಸೋಮವಾರ ಎಪಿಎಂಸಿ ಬಳಿ ಗೋದಾಮಿಗೆ ಹೋಗುತ್ತಿದ್ದ ಯೂರಿಯಾ ತುಂಬಿದ ಲಾರಿ ತಡೆದು ಪ್ರತಿಭಟನೆ ನಡೆಸಿದರು. ರಸಗೊಬ್ಬರ ಮಾರಾಟಗಾರರು ಯೂರಿಯವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಹಾಗಾಗಿ ಎಪಿಎಂಸಿ ಆವರಣದಲ್ಲಿಯೇ ಯೂರಿಯಾವನ್ನು ಮಾರಾಟ ಮಾಡಲಿ. ಸ್ಥಳಕ್ಕೆ ತಹಸೀಲ್ದಾರ್‌ ಹಾಗೂ ಕೃಷಿ ಅಧಿಕಾರಿಗಳು ಬರಲಿ ಎಂದು ರೈತರು ಪಟ್ಟು ಹಿಡಿದರು. ನಂತರ ಸ್ಥಳಕ್ಕಾಗಮಿಸಿದ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಪೊಲೀಸರು ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು.