Asianet Suvarna News Asianet Suvarna News

ಸರ್ಜಾಪುರ-ಹೆಬ್ಬಾಳ ಸಂಪರ್ಕಿಸುವ ನಮ್ಮ ಮೆಟ್ರೋ 3ಎ ಹಂತಕ್ಕೆ ಕೇಂದ್ರದ ಒಪ್ಪಿಗೆ!

ಬೆಂಗಳೂರಿನ ಹೆಬ್ಬಾಳದಿಂದ ಸರ್ಜಾಪುರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ 3ಎ ಹಂತದ ಯೋಜನೆಗೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ. ಈ ಯೋಜನೆಯ ವೆಚ್ಚ ಸುಮಾರು 27,000 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಒಟ್ಟು 28 ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

Urban Development Department has approved to BMRCL Sarjapur Hebbal Metro sat
Author
First Published Oct 15, 2024, 9:01 PM IST | Last Updated Oct 15, 2024, 9:01 PM IST

ಬೆಂಗಳೂರು (ಅ.15): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಇನ್ಮೇಲೆ ಹೆಜ್ಜೆ ಹೆಜ್ಜೆಗೂ ಮೆಟ್ರೋ ನಿಲ್ದಾಣಗಳು ಸಿಗಲಿದ್ದು, ಬೆಂಗಳೂರಿಗೆ ಮೆಟ್ರೋ ಸಿಟಿ ಎಂದು ಹೇಳಬಹುದು. ನಗರದ ಹೆಬ್ಬಾಳದಿಂದ ‘ಟೆಕ್‌ ಹಬ್‌’ ಸರ್ಜಾಪುರ ಸಂಪರ್ಕಿಸಲಿರುವ (37 ಕಿ.ಮೀ) ನಮ್ಮ ಮೆಟ್ರೋ 3ಎ ಹಂತದ ಯೋಜನೆಗೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ. ಈ ಮೂಲಕ ಬೆಂಗಳೂರಿನ ಪ್ರಮುಖ ಜನನಿಬಿಡ ಸ್ಥಳಗಳಿಗೆ ತಲುಪಲು ಹೆಚ್ಚು ಅನುಕೂಲವಾಗಲಿದೆ.

ಕೇಂದ್ರದ ನಗರಾಭಿವೃದ್ಧಿ ಇಲಾಖೆಯ ಒಪ್ಪಿಗೆ ನಂತರ, ಕೇಂದ್ರ ಸಚಿವ ಸಂಪುಟ ಯೋಜನೆಗೆ ಒಪ್ಪಿಗೆ ನೀಡಬೇಕಿದ್ದು, ಅದಕ್ಕೂ ಮುನ್ನ ಆರ್ಥಿಕ ಇಲಾಖೆಯು ವಿಸ್ತೃತ ಯೋಜನಾ ವರದಿಯನ್ನು ಪರಿಶೀಲಿಸಿ ಅನುದಾನದ ಕುರಿತು ನಿರ್ಣಯ ಕೈಗೊಳ್ಳಲಿದೆ. 2022-23ರ ಬಜೆಟ್‌ನಲ್ಲಿ ಈ ಯೋಜನೆಗೆ ಸರಿಸುಮಾರು 16,500 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಆದರೆ, ವಿಸ್ತೃತ ಯೋಜನಾ ವರದಿ ಬಳಿಕ ಈ ಯೋಜನೆಯ ವೆಚ್ಚ 27,000 ಕೋಟಿ ರೂ.ಗೆ ತಲುಪಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣ ಟಿಕೆಟ್ ದರ ಹೆಚ್ಚಳ: ಸಾರ್ವಜನಿಕರ ಸಲಹೆ ಕೇಳಿದ ಬಿಎಂಆರ್‌ಸಿಎಲ್

ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಸಚಿವ ಸಂಪುಟ 15,600 ಕೋಟಿ ರೂ. ಮೊತ್ತದ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಹಸಿರು ನಿಶಾನೆ ನೀಡಿತ್ತು. ಇದೀಗ ಸಂಚಾರ ದಟ್ಟಣೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ 3ಎ ಹಂತಕ್ಕೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿರುವುದರಿಂದ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮೊದಲ ಒಪ್ಪಿಗೆ ದೊರೆತಂತಾಗಿದೆ. ಹೆಬ್ಬಾಳದಿಂದ ಸರ್ಜಾಪುರದವರೆಗೆ ಈ ಮಾರ್ಗ ಸಂಪರ್ಕಿಸಲಿದೆ. ಕೋರಮಂಗಲ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಿತ ಸ್ಥಳಗಳಲ್ಲಿ 3ಎ ಹಾದುಹೋಗುವುದರಿಂದ ಹೆಚ್ಚಿನ ಅನುಕೂಲ ಆಗಲಿದೆ. ಕಳೆದ ಜೂನ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಈ ಯೋಜನೆಯ ಡಿಪಿಆರ್‌ ಸಲ್ಲಿಸಿತ್ತು. ಸರ್ಕಾರ ತನ್ನ ಒಪ್ಪಿಗೆ ನೀಡಿ ಕೇಂದ್ರದ ಅನುಮತಿಗಾಗಿ ಯೋಜನಾ ವಿವರ ಕಳುಹಿಸಿತ್ತು.

ಡಿಪಿಆರ್‌ ಪ್ರಕಾರ ಸುರಂಗ ಮಾರ್ಗ ಹಾಗೂ ಎತ್ತರಿಸಿದ ಮಾರ್ಗ (ಎಲಿವೆಟೆಡ್‌) ಸೇರಿ ಒಟ್ಟೂ 28 ನಿಲ್ದಾಣಗಳನ್ನು 3ಎ ಹಂತ ಹೊಂದಿದೆ. ಸರ್ಜಾಪುರದಿಂದ ಕೋರಮಂಗಲ 3ನೇ ಬ್ಲಾಕ್‌ವರೆಗೆ ಎತ್ತರಿಸಿದ ಮಾರ್ಗ ಇರಲಿದ್ದು, ಇಲ್ಲಿ 15 ನಿಲ್ದಾಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ. 3ನೇ ಬ್ಲಾಕ್‌ನಿಂದ ವೆಟರ್ನರಿ ಕಾಲೇಜಿನವರೆಗೆ ಸುರಂಗ ಮಾರ್ಗವಿರಲಿದ್ದು 11 ನಿಲ್ದಾಣಗಳು ಇರಲಿವೆ. ಮುಂದಿನ ಗಂಗಾನಗರ, ಹೆಬ್ಬಾಳ ನಿಲ್ದಾಣಗಳು ಪುನಃ ಎಲಿವೆಟೆಡ್‌ ಆಗಿರಲಿವೆ. ಹೆಬ್ಬಾಳದಲ್ಲಿ ಸುರಂಗರಸ್ತೆಯ ಯೋಜನೆಯೂ ಹಾದು ಹೋಗಲಿರುವ ಕಾರಣ ಬಿಬಿಎಂಪಿ ಜೊತೆಗೆ ನಗರಾಭಿವೃದ್ಧಿ ಇಲಾಖೆ ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬೆಂಗಳೂರು ಮಳೆ: ಶಾಲೆಗಳು ರಜೆ, ಪದವಿ ಹಂತದ ಕಾಲೇಜುಗಳಿಗೆ ರಜೆ ಇಲ್ಲ!

ಹೊಸ ಮಾರ್ಗದ ಮೆಟ್ರೋ ನಿಲ್ದಾಣಗಳ ವಿವರ:
ಸರ್ಜಾಪುರ, ಕಾಡ ಅಗ್ರಹಾರ ರಸ್ತೆ, ಸೋಮಾಪುರ, ದೊಮ್ಮಸಂದ್ರ, ಮುತ್ತನಲ್ಲೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ಕಾರ್ಮೆಲ್‌ರಾಂ, ದೊಡ್ಡಕನ್ನಳ್ಳಿ, ಕೈಕೊಂಡನಹಳ್ಳಿ, ಬೆಳ್ಳಂದೂರು ಗೇಟ್‌, ಇಬ್ಬಲೂರು, ಅಗರ, ಜಕ್ಕಸಂದ್ರ, ಕೋರಮಂಗಲ 3ನೇ ಬ್ಲಾಕ್, ಕೋರಮಂಗಲ 2ನೇ ಬ್ಲಾಕ್, ಡೈರಿ ಸರ್ಕಲ್, ನಿಮ್ಹಾನ್ಸ್, ಶಾಂತಿನಗರ, ಟೌನ್ ಹಾಲ್, ಕೆ.ಆರ್.ಸರ್ಕಲ್, ಬಸವೇಶ್ವರ ಸರ್ಕಲ್, ಬೆಂಗಳೂರು ಗಾಲ್ಫ್ ಕೋರ್ಸ್‌, ಪ್ಯಾಲೇಸ್ ಗುಟ್ಟಹಳ್ಳಿ, ಮೇಖ್ರಿ ಸರ್ಕಲ್, ವೆಟರ್ನರಿ ಕಾಲೇಜ್, ಗಂಗಾನಗರ ಮತ್ತು ಹೆಬ್ಬಾಳದಲ್ಲಿ ನಿಲ್ದಾಣ ಇರಲಿದೆ. ಸರ್ಜಾಪುರದಲ್ಲಿ ಡಿಪೋ ನಿರ್ಮಾಣ ಆಗಲಿದೆ.

Latest Videos
Follow Us:
Download App:
  • android
  • ios