ಬೆಂಗಳೂರು [ಆ.28]: ನಗರದ ಬೈಯಪ್ಪನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ರೈಲ್ವೆ ಟರ್ಮಿನಲ್‌ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, 2020ರ ಮಾರ್ಚ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬೈಯ್ಯಪ್ಪನಹಳ್ಳಿ ರೈಲ್ವೆ ಟರ್ಮಿನಲ್‌ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2015-16ನೇ ಆಯವ್ಯಯದಲ್ಲಿ ಯೋಜನೆ ಮಂಜೂರು ಮಾಡಲಾಗಿದೆ. ಈ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಇಲ್ಲಿಯವರೆಗೂ ಶೇ.50ರಷ್ಟುಕಾಮಗಾರಿ ನಡೆದಿಲ್ಲ. ಈ ವಿಳಂಬದಿಂದಾಗಿ ಯೋಜನಾ ವೆಚ್ಚವೂ ಹೆಚ್ಚಾಗುತ್ತಿದೆ. ಅಧಿಕಾರಿಗಳು ಇಂತಹ ದೋರಣೆ ಬಿಡಬೇಕು ಎಂದರು.

ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಹಲವು ಅಧಿಕಾರಿಗಳು ಸೇವೆ ಸಲ್ಲಿಸುತ್ತಿದೀರಿ. ಕರ್ನಾಟಕದ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಇಚ್ಚೆ ಇಲ್ಲದಿದ್ದಲ್ಲಿ ತಕ್ಷಣ ವರ್ಗಾವಣೆ ಪಡೆದು ನಿಮ್ಮ ರಾಜ್ಯಗಳಿಗೆ ತೆರಳಿ. ಆಗ ಆಸಕ್ತಿಯುಳ್ಳ ಅಧಿಕಾರಿಗಳು ಬರಲಿದ್ದು, ಕಾಮಗಾರಿಗಳು ಪೂರ್ಣಗೊಳಿಸಲಿದ್ದಾರೆ ಎಂದು ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್‌ ಮತ್ತು ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್‌ ವರ್ಮಾ ಅವರನ್ನು ವೇದಿಕೆಯಲ್ಲಿ ತರಾಟೆ ತೆಗೆದುಕೊಂಡರು.

ಬೈಯ್ಯಪ್ಪನಹಳ್ಳಿಯಲ್ಲಿ 192 ಕೋಟಿ ರು. ವೆಚ್ಚದಲ್ಲಿ ರೈಲ್ವೆ ಟರ್ಮಿನಲ್‌ ನಿರ್ಮಿಸಲಾಗುತ್ತಿದೆ. ಈಗಾಗಲೇ 70 ಕೋಟಿ ರು. ವಿನಿಯೋಗಿಸಲಾಗಿದೆ. ರಾಜ್ಯ ಸರ್ಕಾರದಿಂದಲೂ ಸಂಪೂರ್ಣ ಸಹಕಾರ ನೀಡಲಾಗಿದೆ. ಆದರೂ, ಕಾಮಗಾರಿಗೆ ವೇಗ ನೀಡಿಲ್ಲ, ತಕ್ಷಣ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಮೇಲ್ಸೇತುವೆ ಕಾಮಗಾರಿ ಪರಿಶೀಲನೆ:

ಬೈಯಪ್ಪನಹಳ್ಳಿಯ ಸೇವಾನಗರದಿಂದ ಓಲ್ಡ್‌ ಮದ್ರಾಸ್‌ ರಸ್ತೆ ಮಾರ್ಗ ಸಂಪರ್ಕಿಸುವ ಮೇಲ್ಸೇತುವೆ ಕಾಮಗಾರಿಯನ್ನು ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್‌ ಅಂಗಡಿ ಪರಿಶೀಲಿಸಿದರು. ಸೇತುವೆ ಕಾಮಗಾರಿಯಿಂದ ಸಾರ್ವಜನಿಕರು ತೀವ್ರ ತರದ ತೊಂದರೆ ಅನುಭವಿಸುತ್ತಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಇದೇ ವೇಳೆ ಸೂಚನೆ ಅಧಿಕಾರಿಗಳಿಗೆ ಸೂಚಿಸಿದರು.

ಟರ್ಮಿನಲ್‌ನಲ್ಲಿ 7 ಪ್ಲಾಟ್‌ಫಾರ್ಮ್ ನಿರ್ಮಾಣ

ಸುಮಾರು 192 ಕೋಟಿ ರು. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೈಯ್ಯಪ್ಪನಹಳ್ಳಿಯಲ್ಲಿ ಟರ್ಮಿನಲ್‌ ನಿರ್ಮಾಣವಾಗುತ್ತಿದೆ. ಈ ರೈಲ್ವೆ ಟರ್ಮಿನಲ್‌ನಲ್ಲಿ 7 ಪ್ಲಾಟ್‌ಫಾರ್ಮ್ ಗಳಿರಲಿವೆ. ಎಲ್ಲ ಪ್ಲಾಟ್‌ಫಾರ್ಮ್ ಗಳಿಗೆ ಸೇರುವ ನೆಲ ಮಹಡಿ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಆಗಮಿಸುವ ಹಾಗೂ ನಿರ್ಗಮಿಸುವವರಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗುತ್ತಿದೆ. ರೈಲು ಬರುವ 15 ನಿಮಿಷಗಳ ಮುಂಚಿತವಾಗಿ ಪ್ರಯಾಣಿಕರಿಗೆ ಪ್ಲಾಟ್‌ಫಾರ್ಮ್ ತೆರಳುವ ವ್ಯವಸ್ಥೆ ಮಾಡಲಾಗುತ್ತಿದೆ.

ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರು ಸಿಟಿ ರೈಲು ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಮೆಜೆಸ್ಟಿಕ್‌ಗೆ ಬರುವ ಕೆಲವು ರೈಲುಗಳು ಬೈಯಪ್ಪನಹಳ್ಳಿ ಮೂಲಕ ಸಂಚಾರ ಆರಂಭಿಸಲಿವೆ. ಬೈಯಪ್ಪನಹಳ್ಳಿವರೆಗೆ ಮೆಟ್ರೋ ವ್ಯವಸ್ಥೆ ಇರುವ ಕಾರಣ ಜನರಿಗೆ ಈ ನಿಲ್ದಾಣ ಸಂಪರ್ಕಿಸುವುದು ಕೂಡ ಸುಲಭವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.