ಬೆಂಗಳೂರು(ಫೆ. 03): ಬೆಂಗಳೂರು ‘ಸಬ್‌ ಅರ್ಬನ್‌ ರೈಲು ಯೋಜನೆ ಈ ಹಿಂದೆಯೇ ಅನುಷ್ಠಾನವಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಕೇಳಿದ ಕೆಲವು ಮಾಹಿತಿಯನ್ನು ರಾಜ್ಯ ಸರ್ಕಾರ ನೀಡದ ಕಾರಣ ವಿಳಂಬವಾಯಿತು. ಈಗ ಸಂಸದರು, ಅಧಿಕಾರಿಗಳು ಹಾಗೂ ತಾವು ಯೋಜನೆ ಜಾರಿಗೆ ಸಾಕಷ್ಟು ಪ್ರಯತ್ನ ಮಾಡಿದ್ದೇವೆ ಎಂದು ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳು ಸಹ ಕೆಲಸ ಮಾಡಿವೆ. ಒಟ್ಟಾರೆ ಈಗ ಆಯವ್ಯಯದಲ್ಲಿ ಯೋಜನೆ ಅನುಷ್ಠಾನಕ್ಕೆ ಘೋಷಿಸಿರುವುದರಿಂದ ತ್ವರಿತವಾಗಿ ಯೋಜನೆ ಕಾಮಗಾರಿ ಆರಂಭವಾಗಲಿದೆ. ಕೇಂದ್ರದ ಘೋಷಣೆಯಿಂದ ಬ್ಯಾಂಕ್‌ಗಳು ಸಾಲ ಸೌಲಭ್ಯವನ್ನು ನೀಡುವುದು ಸುಲಭವಾಗಲಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಬ್‌ ಅರ್ಬನ್‌ ರೈಲು ಹವಾನಿಯಂತ್ರಿತವಾಗಿದ್ದ ಮಾತ್ರಕ್ಕೆ ಬಡವರು ಇದರಿಂದ ವಂಚಿತರಾಗುವುದಿಲ್ಲ, ಚಹ ಮಾರುವವರು ದೇಶದ ಪ್ರಧಾನಿಯಾಗಿದ್ದಾರೆ. ಮಿಲ್‌ನಲ್ಲಿ ಕೆಲಸ ಮಾಡಿದವರು ಮುಖ್ಯಮಂತ್ರಿಗಳಾಗಿರುವಾಗ ಸಬ್‌ಅರ್ಬನ್‌ ರೈಲು ಸಹ ಬಡವರಿಗಾಗಿಯೇ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಆಧುನೀಕರಣ ಕಾಮಗಾರಿ ಬರುವ ಮಾರ್ಚ್‌ ಒಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಣ್ಣ ಪುಟ್ಟ ಸಮಸ್ಯೆ ಉಂಟಾಗದಿದ್ದರೆ 15 ದಿನ ಹೆಚ್ಚಾಗಬಹುದು, ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವ ಸುರೇಶ್‌ ಅಂಗಡಿ ತಿಳಿಸಿದರು.