Asianet Suvarna News Asianet Suvarna News

ಉತ್ತರ ಕರ್ನಾಟಕಕ್ಕೆ ಬೇಕಿದೆ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌: ಕೇಂದ್ರ ಸಚಿವ ಅಂಗಡಿ

ಉಕ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅವಶ್ಯಕ| ಹುಬ್ಬಳ್ಳಿಯಲ್ಲಿ ಎಲ್ಲ ಸೌಕರ್ಯವಿದೆ ಅಲ್ಲಿಯೇ ಆಗುವುದು ಸೂಕ್ತ| ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡ ಮೂರು ನಗರಗಳಿಗೆ ಕೈಗಾರಿಕೆ ಕಾರಿಡಾರ್ ನಿರ್ಮಾಣ ಮಾಡಲಾಗುವುದು| 

Union Minister Suresh Angadi Says North Karnataka Need International Airport
Author
Bengaluru, First Published Mar 10, 2020, 11:48 AM IST

ಬೆಳಗಾವಿ(ಮಾ.10):ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಲ್ಲಿಯೇ ಉತ್ತರ ಕರ್ನಾಟಕ ಭಾಗದಲ್ಲಿಯೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆಗುವ ಅವಶ್ಯಕತೆ ಇದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ. 

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಗಬೇಕು ಎಂದು ಬಹುದಿನಗಳ ಬೇಡಿಕೆಯಿದೆ. ಆದ್ದರಿಂದ ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗಿದೆ. ಇದಕ್ಕೆ ಸಾವಿರಾರು ಎಕರೆ ಭೂಮಿ ಬೇಕು ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಈಗಾಗಲೇ ಬೆಳಗಾವಿ ಜಿಲ್ಲೆಯ ಜನರು ರಾಷ್ಟ್ರೀಯ ಹೆದ್ದಾರಿ, ವಿಶ್ವವಿದ್ಯಾಲಯಗಳಿಗೆ, ಕೈಗಾರಿಕೆ ಪ್ರದೇಶಕ್ಕೆ, ಸುವರ್ಣ ಸೌಧದ ನಿರ್ಮಾಣಕ್ಕೆ, ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ, ರೈಲ್ವೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಎಕರೆ ಜಮೀನು ನೀಡಿದ್ದಾರೆ. ಇದೀಗ ಮತ್ತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿ ಕೇಳಿದರೆ ಜನರು ನಮ್ಮ ವಿರುದ್ಧ ಆಕ್ರೋಶಗೊಳ್ಳುತ್ತಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿಯೇ ಸಾಕಷ್ಟು ಭೂಮಿ ಲಭ್ಯವಿದ್ದು, ಅಲ್ಲಿಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡ ಮೂರು ನಗರಗಳಿಗೆ ಕೈಗಾರಿಕೆ ಕಾರಿಡಾರ್ ನಿರ್ಮಾಣ ಮಾಡಲಾಗುವುದು. ಇದರಿಂದ ಹಲವಾರು ವಾಣಿಜ್ಯ ಚಟುವಟಿಕಗಳು ಒಂದು ಪ್ರದೇಶದಲ್ಲಿ ಒಗ್ಗೂಡುತ್ತವೆ. ಆಗ ಸುತ್ತಲಿನ ಪ್ರದೇಶದಲ್ಲಿ ಕಚೇರಿ ಮತ್ತು ವಸತಿ ಕ್ಷೇತ್ರಗಳು ವೇಗವಾಗಿ ಪ್ರಗತಿ ಕಾಣುತ್ತವೆ. ಲಕ್ಷಾಂತರ ಜನರಿಗೆ ಉದ್ಯೋಗ ಅವಕಾಶಗಳು ಸಿಗುತ್ತವೆ. ಬೆಳಗಾವಿ-ದೆಹಲಿ ನಡುವೆ ನೇರ ವಿಮಾನ ನಿಲ್ದಾಣ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುತ್ತಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದರು. 

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಅಧ್ಯಕ್ಷ ಶಶಿ ಪಾಟೀಲ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಮಾಜಿ ಮೇಯರ್ ಶಿವಾಜಿ ಸುಂಟಕರ್, ಮಹೇಶ ಮೊಹಿತೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
 

Follow Us:
Download App:
  • android
  • ios