ಬೆಳಗಾವಿ(ಜು.25): ನಗರದ ಬಿಮ್ಸ್‌ ಆವರಣದಲ್ಲಿ ನಿಲ್ಲಿಸಲಾಗಿದ್ದ ಆ್ಯಂಬುಲೆನ್ಸ್‌ ಸುಟ್ಟು, ಕಲ್ಲು ತೂರಾಟ ನಡೆಸಿದ್ದಲ್ಲದೇ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ದೇಶದ್ರೋಹಿಗಳು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಕಿಡಿಕಾರಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಮ್ಸ್‌ ಎದುರು ಬುಧವಾರ ರಾತ್ರಿ ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿರುವ ಕೃತ್ಯ ಪೂರ್ವನಿಯೋಜಿತ. ರೋಗಿ ಮೃತಪಟ್ಟ ಕೇವಲ ಅರ್ಧ ಗಂಟೆಯಲ್ಲಿ ಅಷ್ಟೊಂದು ಜನ ಸೇರಿರುವುದು ಪೂರ್ವ ನಿಯೋಜಿತ ಕೃತ್ಯ ಎನಿಸುತ್ತದೆ ಎಂದು ಹೇಳಿದ್ದಾರೆ. 

ಬೆಳಗಾವಿ: ಕೊರೋನಾ ಸೋಂಕಿತ ಸಾವು, ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಈ ಕೃತ್ಯದ ಹಿಂದೆ ಯಾವ ಶಕ್ತಿ ಇದೆ ಎಂಬುದನ್ನು ಕಂಡು ಹಿಡಿಯಬೇಕು. ಪೊಲೀಸರು, ಗುಪ್ತಚರ ಇಲಾಖೆಯವರು ಈ ಕೆಲಸ ಮಾಡಬೇಕು. ಬಿಮ್ಸ್‌ ವೈದ್ಯರು, ನರ್ಸ್‌ಗಳು ಹೆದರುವ ಅವಶ್ಯಕತೆ ಇಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಆತ್ಮಸ್ಥೈರ್ಯ ತುಂಬಿದರು. ಆ್ಯಂಬುಲೆನ್ಸ್‌ ಸುಡುವುದು ಅತ್ಯಂತ ಹೇಯಕೃತ್ಯ ಎಂದರು.