ಬೆಳಗಾವಿ: ದಲಿತ ಮಹಿಳೆ ಮನೇಲಿ ಉತ್ತರ ಕರ್ನಾಟಕ ಶೈಲಿಯ ಭೋಜನ ಸವಿದ ಕೇಂದ್ರ ಸಚಿವ
* ಬೆಳಗಾವಿಗೆ ಬಂದ ಸಚಿವ ಸೋಮಪ್ರಕಾಶ್
* ಗೋವಿಂದ ಕಾರಜೋಳ, ಮಂಗಲ ಅಂಗಡಿ ಸಾಥ್
* ವಿದ್ಯುತ್ ಕಡಿತ ಮಾಡದಂತೆ ತಾಕೀತು
ಬೆಳಗಾವಿ(ಜೂ.29): ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರಕ್ಕೆ 8 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಪರಿಶೀಲನೆಗೆ ಆಗಮಿಸಿದ ಕೇಂದ್ರ ಸಚಿವ ಸೋಮಪ್ರಕಾಶ ಅವರು ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ದಲಿತ ವೃದ್ಧೆಯೊಬ್ಬರ ಮನೆಯಲ್ಲಿ ಉತ್ತರ ಕರ್ನಾಟಕ ಶೈಲಿಯ ಭೋಜನ ಸವಿದರು.
ಗ್ರಾ.ಪಂ. ಮಾಜಿ ಸದಸ್ಯೆಯೂ ಆಗಿರುವ 87 ವರ್ಷ ವಯಸ್ಸಿನ ಚಾಯವ್ವ ವಸಂತ ಮಾಸ್ತೆ ಎಂಬವರ ಮನೆಯಲ್ಲಿ ಸಚಿವರು ಭೋಜನ ಸವಿದರು. ಸ್ವತಃ ವೃದ್ಧೆಯು ಕಟ್ಟಿಗೆ ಒಲೆಯ ಮೇಲೆ ಬಿಳಿಜೋಳ ರೊಟ್ಟಿ, ಜುನುಕ, ಬದನೆಕಾಯಿ ಎಣ್ಣೇಗಾಯಿ, ಸಾರು, ಅನ್ನ, ಶೇಂಗಾ ಮತ್ತು ಪುಟಾಣಿ ಚಟ್ನಿ ತಯಾರಿಸಿದ್ದರು. ಇಬ್ಬರು ಮಕ್ಕಳು ಮದುವೆಯಾದ ಬಳಿಕ ಪ್ರತ್ಯೇಕವಾಗಿ ಚಾಯವ್ವ ಒಬ್ಬಂಟಿಯಾಗಿ ಕಚ್ಚಾಮಣ್ಣಿನ ಮನೆಯಲ್ಲಿ ವಾಸವಾಗಿದ್ದಾಳೆ.
BELAGAVI: ರಾಜ್ಯ ಸರ್ಕಾರವನ್ನು ಟೀಕಿಸಿ ಎಂಇಎಸ್ ಉದ್ಧಟತನ
ಕೇಂದ್ರ ಸಚಿವ ಸೋಮಪ್ರಕಾಶ ಮನೆಗೆ ಆಗಮಿಸುತ್ತಿದ್ದಂತೆಯೇ ಅವರ ಕಾಲಿಗೆ ಎರಗಿ ವೃದ್ಧೆ ಚಾಯವ್ವ ನಮಿಸಿದರು. ದಲಿತ ಮಹಿಳೆಯರು ಆರತಿ ಬೆಳಗಿ ಕೇಂದ್ರ ಸಚಿವರನ್ನು ಸ್ವಾಗತಿಸಿದರು. ಸಚಿವ ಗೋವಿಂದ ಕಾರಜೋಳ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರು ಕೂಡ ಕೇಂದ್ರ ಸಚಿವರ ಜೊತೆಗೆ ಭೋಜನ ಸವಿದರು. ಸಂಸದೆ ಮಂಗಲ ಅಂಗಡಿ ಅವರು ಸಿಹಿಯನ್ನಷ್ಟೇ ಸವಿದರು.
ವಿದ್ಯುತ್ ಕಡಿತ ಮಾಡದಂತೆ ತಾಕೀತು
ದಲಿತ ವೃದ್ಧೆಯ ಮನೆಯಲ್ಲಿ ಕೇಂದ್ರ ಸಚಿವರು ಭೋಜನಕ್ಕೆ ಆಗಮಿಸುವವರಿದ್ದರು. ಆದರೆ, ಪದೇ ಪದೆ ವಿದ್ಯುತ್ ಕೈಕೊಡುತ್ತಿರುವುದನ್ನು ಗಮನಿಸಿದ ಬಿಜೆಪಿ ಮುಖಂಡ ಅಭಯ ಅವಲಕ್ಕಿ ಅವರು ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ, ಕೇಂದ್ರ ಸಚಿವರು ಹಿಂಡಲಗಾ ಗ್ರಾಮಕ್ಕೆ ಭೋಜನಕ್ಕೆ ಆಗಮಿಸಲಿದ್ದಾರೆ. ಪದೇ ಪದೆ ವಿದ್ಯುತ್ ಕಡಿತ ಮಾಡದಂತೆ ತಾಕೀತು ಮಾಡಿದರು. ಯಾವುದೇ ಕಾರಣಕ್ಕೂ ಎರಡು ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಬಾರದು ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಹಿಂಡಲಗಾ ಸಿದ್ದಾರ್ಥ ಕಾಲೋನಿಗೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸೌಲಭ್ಯ ಕಲ್ಪಿಸಿದರು.