ಹುಬ್ಬಳ್ಳಿ(ಡಿ.18): ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರಿಗೆ ಕಾನೂನು ಏನು ಎಂಬುದು ಗೊತ್ತಿಲ್ಲ. ಕಾಂಗ್ರೆಸ್‌, ತೃಣಮೂಲ, ಎಡಪಂಥೀಯ ಪಕ್ಷಗಳು ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.

ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಯಾರ ಪೌರತ್ವ ಕಸಿದುಕೊಳ್ಳುವ ಪ್ರಸ್ತಾಪ ಇದರಲ್ಲಿ ಇಲ್ಲ. ಇದು ಪೌರತ್ವ ಕೊಡುವ ಕಾಯ್ದೆ. ಆದರೆ ಕಾಂಗ್ರೆಸ್‌ ಪಕ್ಷ ಅನಗತ್ಯವಾಗಿ ಜನರ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದೆ. ಇದು ಕಾಂಗ್ರೆಸ್‌ನ ಸ್ವಾರ್ಥ ಹಾಗೂ ಹಿಂದೂ ವಿರೋಧಿ ನೀತಿಯಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಗತ್ತಿನಲ್ಲಿರುವ 10-20 ಸಾವಿರ ಹಿಂದೂಗಳು, ಸಿಖ್ಖರು, ಜೈನರು, ಕ್ರಿಶ್ಚಿಯನ್ನರು, ಬೌದ್ಧರು ಇಲ್ಲಿಗೆ ಬರ್ತಾರೆ ಎಂದರೆ ಕಾಂಗ್ರೆಸ್‌ಗೆ ಏಕೆ ಹೊಟ್ಟೆ ಉರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಕಾಯ್ದೆಯಲ್ಲಿನ ಅಂಶಗಳ ಬಗ್ಗೆ ಸ್ಪಷ್ಟನೆ ಬೇಕಾದರೆ ನಾವು ಮಾಡುತ್ತೇವೆ. ಆದರೆ ಕಾಯ್ದೆ ಹಿಂಪಡೆಯುವ, ಪ್ರತಿಭಟನೆ ಹಿನ್ನೆಲೆಯಲ್ಲಿ ತಿದ್ದುಪಡಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.