* ಯಡಿಯೂರಪ್ಪ ಬಡವರಿಗೆ ಪ್ಯಾಕೇಜ್‌ ಘೋಷಣೆ ಮಾಡಿದ್ದು ಸ್ವಾಗತಾರ್ಹ * ಕೋವಿಡ್‌ ವ್ಯಾಕ್ಸಿನ್‌ಗೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನವರು 58 ಬಾರಿ ಸುಳ್ಳು ಹೇಳಿಕೆ ನೀಡಿದ್ದರು* ಕಾಂಗ್ರೆಸ್‌ ನಾಯಕರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ

ಹುಬ್ಬಳ್ಳಿ(ಮೇ.20): ಕೊರೋನಾ ಲಸಿಕೆಗೇನು ಕಾಂಗ್ರೆಸ್‌ ಕೊಡುವುದಿದೆ ಬದನೆಕಾಯಿ... ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ ಪರಿ ಇದು. ಇಲ್ಲಿನ ಕಿಮ್ಸ್‌ನ ಆವರಣದಲ್ಲಿ ಪಿಎಂ ಕೇರ್‌ ಫಂಡ್‌ನಿಂದ ಬಂದ 27 ವೆಂಟಿಲೇಟರ್‌ಗಳನ್ನು ಹಸ್ತಾಂತರಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಸಿಕೆಗೆ ಕಾಂಗ್ರೆಸ್‌ ನೂರು ಕೋಟಿ ಕೊಡುವುದಾಗಿ ಹೇಳಿದೆ. ಆದರೆ, ಯಾವುದೇ ಎಂಪಿ, ಎಂಎಲ್‌ಎ, ಎಂಎಲ್‌ಸಿ ಫಂಡ್‌ ಸರ್ಕಾರದ್ದು. ಈ ವರ್ಷ ಸಂಸದರ ನಿಧಿಯನ್ನು ಕೋವಿಡ್‌ಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವನಾದ ನಾನೇ ಈ ಸಲ ಎಂಪಿ ಫಂಡ್‌ ಕೊಡಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಅದೇ ರೀತಿ ರಾಜ್ಯದಲ್ಲೂ ಶಾಸಕರ ನಿಧಿ ಬಳಸಿಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಹೀಗಿರುವಾಗ ಕಾಂಗ್ರೆಸ್‌ ಪಕ್ಷದವರೇನು ಬದನೆಕಾಯಿ ಕೊಡುತ್ತಾರೆ ಎಂದರು.

ಕೋವಿಡ್‌ ವ್ಯಾಕ್ಸಿನ್‌ಗೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ನಾಯಕರು ಬರೋಬ್ಬರಿ 58 ಬಾರಿ ಸುಳ್ಳು ಹೇಳಿಕೆ ನೀಡಿದ್ದರು. ರಾಜಕಾರಣಕ್ಕೆ ಮಾತನಾಡಲು ಬೇಕಾದಷ್ಟುವಿಷಯಗಳಿರುತ್ತವೆ. ಅದನ್ನೆಲ್ಲ ಬಿಟ್ಟು ಕೋವಿಡ್‌ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆ. ಲಸಿಕೆ ಸರಿಯಿಲ್ಲ, ಲಸಿಕೆ ಪಡೆಯುವುದರಿಂದ ಲಕ್ವಾ ಹೊಡೆಯುತ್ತದೆ, ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದೆಲ್ಲ ಸುಳ್ಳು ಹೇಳಿದರು. ಇದರ ಪರಿಣಾಮವಾಗಿ ಜನತೆ ಲಸಿಕೆ ಪಡೆಯಲು ಮುಂದೆ ಬರಲಿಲ್ಲ ಎಂದು ಜೋಶಿ ಕಿಡಿಕಾರಿದರು.

"

ವೆಂಟಿಲೇಟರ್‌:

ಪಿಎಂ ಕೇರ್‌ ಫಂಡ್‌ನಿಂದ ಖರೀದಿಸಿದ ವೆಂಟಿಲೇಟರ್‌ ಬಗ್ಗೆಯೂ ಅಪಪ್ರಚಾರ ಮಾಡಿದರು. ಕಳಪೆ ಮಟ್ಟದ ವೆಂಟಿಲೇಟರ್‌ ನೀಡಿದ್ದಾರೆ ಎಂದರು. ಆದರೆ, ಪಿಎಂ ಕೇರ್‌ ಫಂಡ್‌ನಿಂದ ಖರೀದಿಸಿದ ವೆಂಟಿಲೇಟರ್‌ಗಳು ಅತ್ಯುತ್ತಮ ದರ್ಜೆಯವು. ಕೆಲವೊಂದು ಆಸ್ಪತ್ರೆಗಳಲ್ಲಿ ಅವುಗಳನ್ನು ಬಳಸುವ ಪರಿಣತಿ ಪಡೆದ ತಜ್ಞರು ಇಲ್ಲದ ಕಾರಣ ಬಳಕೆಯಾಗಿಲ್ಲ. ಡಿಆರ್‌ಡಿಒ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಈ ವೆಂಟಿಲೇಟರ್‌ಗಳ ಕಾರ್ಯವೈಖರಿ ನೋಡಿ ಹೇಳಿಕೆ ನೀಡಲಿ. ರಾಹುಲ್‌ ಗಾಂಧಿ ಹೇಳುವುದನ್ನು ಕೇಳಿ ಕಾಂಗ್ರೆಸ್‌ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ರಾಹುಲ್‌ ಗಾಂಧಿಗೆ ಏನೂ ತಿಳಿಯುವುದೇ ಇಲ್ಲ. ಅಂಥವರ ಬದಲು ಯಾರಾದರೂ ವೆಂಟಿಲೇಟರ್‌ ಬಗ್ಗೆ ಗೊತ್ತಿದ್ದವರನ್ನು ಕೇಳಿ ಹೇಳಿಕೆ ಕೊಡಲಿ ಎಂದು ಕಿವಿಮಾತು ಹೇಳಿದರು.

ಕರ್ನಾಟಕದಲ್ಲಿ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಸರ್ಕಾರಕ್ಕೆ ಸಲಹೆ ಕೊಟ್ಟ ಕೇಂದ್ರ ಸಚಿವ

ಮುಖ್ಯಮಂತ್ರಿ ಪ್ಯಾಕೇಜ್‌ ಸ್ವಾಗತ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇವತ್ತು ಬಡವರಿಗೆ ಪ್ಯಾಕೇಜ್‌ ಘೋಷಣೆ ಮಾಡಿದ್ದು, ಸ್ವಾಗತಾರ್ಹ ಎಂದರು. ಪ್ಯಾಕೇಜ್‌ ಅರೆಕಾಸಿನ ಮಜ್ಜಿಗೆ ಎಂದು ಕಾಂಗ್ರೆಸ್‌ ಪ್ಯಾಕೇಜ್‌ ಬಗ್ಗೆ ಟೀಕಿಸಿದ್ದನ್ನು ಖಂಡಿಸಿದ ಅವರು, ಕಾಂಗ್ರೆಸ್‌ ನಾಯಕರು ಕೆಲಸವಿಲ್ಲದೇ ಸುಮ್ಮನೆ ಕುಳಿತ್ತಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಅಷ್ಟೇ. ಕೋವಿಡ್‌ ಕಾರಣದಿಂದಾಗಿ ದೇಶ, ರಾಜ್ಯದ ಆರ್ಥಿಕತೆ ಸ್ಥಿತಿಗತಿ ನೋಡಬೇಕು. ತದನಂತರ ಪ್ಯಾಕೇಜ್‌ ಘೋಷಿಸಬೇಕು.

ಮುಖ್ಯಮಂತ್ರಿಗಳು ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಒಳ್ಳೆಯ ಪ್ಯಾಕೇಜ್‌ ಘೋಷಿಸಿದ್ದಾರೆ. ಇದರೊಂದಿಗೆ ಕೇಂದ್ರ ಸರ್ಕಾರ ಕೂಡ ಗರೀಬ್‌ ಕಲ್ಯಾಣ ಯೋಜನೆಯಡಿ ಎರಡು ತಿಂಗಳ ಪಡಿತರ ನೀಡುತ್ತಿದೆ. ಕಾಂಗ್ರೆಸ್‌ ಸುಳ್ಳು ಹೇಳುವುದನ್ನು ಪೇಟೆಂಟ್‌ ಮಾಡಿಸಿಕೊಂಡಿದೆ. ಹೀಗಾಗಿ ಇಲ್ಲ​-ಸಲ್ಲದ ಸುಳ್ಳುಗಳನ್ನು ಹೇಳುತ್ತಲೇ ಇರುತ್ತಾರೆ. ಕಾಂಗ್ರೆಸ್‌ ನಾಯಕರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಹುಲ್‌ ಗಾಂಧಿ ಕಳೆದ ಚುನಾವಣೆಯಲ್ಲಿ ವರ್ಷಕ್ಕೆ 72 ಸಾವಿರ ಪ್ರತಿಯೊಬ್ಬರಿಗೂ ನೀಡಲಾಗುವುದು ಎಂದು ಹೇಳಿದ್ದರು. ಜನತೆ ಅವರಿಗೆ 72 ಸ್ಥಾನಗಳನ್ನು ನೀಡಲಿಲ್ಲ ಎಂದು ವ್ಯಂಗ್ಯವಾಡಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona