ದೇಶದಲ್ಲಿ ಬಿಜೆಪಿ ಬಂದ ಮೇಲೆ ನಿರುದ್ಯೋಗ ಹೆಚ್ಚಾಗಿದೆ : ಯತೀಂದ್ರ ಸಿದ್ದರಾಮಯ್ಯ
ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಹಾಗೂ ವರುಣ ಕ್ಷೇತ್ರ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಟಿ. ನರಸೀಪುರ : ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಹಾಗೂ ವರುಣ ಕ್ಷೇತ್ರ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣ ಕ್ಷೇತ್ರದ ಹುಣಸೂರು, ಬಿಳಿಗೆರೆಹುಂಡಿ, ಕಿರಗಸೂರು, ಮನ್ನೆಹುಂಡಿ, ಕೂಡ್ಲೂರು, ಡಣಾಯಕಪುರ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲಿ ಯಾವುದೇ ಅನುದಾನ ನೀಡದೆ ಇದ್ದುದರಿಂದ ಸಮಸ್ಯೆಗಳು ಹೆಚ್ಚಾಗಿದ್ದು, ಈಗ ನಿಮ್ಮೆಲ್ಲರ ಆಶೀರ್ವಾದದಿಂದ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ವರುಣ ಕ್ಷೇತ್ರದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಭಾಗದಲ್ಲಿ ಯಾವುದಾದರೊಂದು ಕಾರ್ಖಾನೆ ತರಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಿಳಿಗೆರೆ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ಕೇಳಿದ್ದೀರಿ, ಯುವಕರಿಗೆ ಕೆಲಸ, ಲೈಬ್ರರಿ, ಪಶು ಆಸ್ಪತ್ರೆ, ಅಲ್ಲದೆ ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ಮಾಡಲು ತಿಳಿಸಿದ್ದೀರಿ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸುತ್ತೇನೆ ಎಂದರು.
ಅಧಿಕಾರಿಗಳು ಚೆನ್ನಾಗಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಜನರು ನಮ್ಮ ಬಳಿಗೆ ಬರುವುದಿಲ್ಲ. ನೀವುಗಳು ನಿಗದಿತ ಸಮಯದಲ್ಲಿ ಜನರ ಸಮಸ್ಯೆಗೆ ಪರಿಹಾರ ಕಂಡುಹಿಡಿದು, ಅವರನ್ನು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಬೇಕು ಎಂದು ಅವರು ಹೇಳಿದರು.
ತಹಸೀಲ್ದಾರ್ ಸುರೇಶ್ ಆಚಾರ್, ಇಓ ಸಿ. ಕೃಷ್ಣ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಅಧಿಕಾರಿಗಳಾದ ಕೋಮಲ, ರಾಜಣ್ಣ, ಶಾಂತ, ಜಿಪಂ ಮಾಜಿ ಸದಸ್ಯ ಮಹಾದೇವ, ತಾಪಂ ಮಾಜಿ ಅಧ್ಯಕ್ಷೆ ಮಂಜುಳ ಮಂಜುನಾಥ್, ವೆಂಕಟೇಶ, ಮಹಾದೇವಸ್ವಾಮಿ, ಬಸವಣ್ಣ, ರಮೇಶ್, ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ಮಹದೇವಣ್ಣ ಮೊದಲಾದವರು ಇದ್ದರು.