ಉಡುಪಿಯಲ್ಲಿ 6 ತಿಂಗಳ ಬಳಿಕ ಕೃಷ್ಣ ದರ್ಶನ ಆರಂಭ : ಇನ್ಮುಂದೆ ಎಳ್ಳು ಅರ್ಪಣೆ
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಉಡುಪಿಯ ಶ್ರೀ ಕೃಷ್ಣ ದರ್ಶನ ಮತ್ತೆ ಆರಂಭವಾಗಿದೆ. ಮತ್ತೊಂದು ಸಲಹೆಯನ್ನು ನೀಡಲಾಗಿದೆ.
ಉಡುಪಿ (ಸೆ.29): ಕೊರೋನಾ ಲಾಕ್‌ಡೌನ್ ಹಿನ್ನೆಲೆ ಕಳೆದ 6 ತಿಂಗಳಿಂದ ಉಡುಪಿ ಕೃಷ್ಣಮಠಕ್ಕೆ ನಿರ್ಬಂಧಿಸಲಾಗಿದ್ದ ಭಕ್ತರ ಭೇಟಿಗೆ ಸೋಮವಾರದಿಂದ ಪುನಃ ಅವಕಾಶ ನೀಡಲಾಗಿದೆ.
ಭಕ್ತರು ಕೃಷ್ಣನ ದರ್ಶನಕ್ಕೆ ತೆರಳುವುದಕ್ಕೆ ವಿಶೇಷ ದಾರಿಯನ್ನು ನಿರ್ಮಿಸಲಾಗಿದ್ದು, ಅದನ್ನು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು, ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರೊಂದಿಗೆ ಶ್ರೀಕೃಷ್ಣ ದೇವರ ಮುಂಭಾಗದಲ್ಲಿ ಲೋಕಾರ್ಪಣೆಗೊಳಿಸಿ, ಅನುಗ್ರಹ ಸಂದೇಶ ನೀಡಿದರು. ನಂತರ ಈ ವಿಶೇಷ ದಾರಿಯಲ್ಲಿ ತೆರಳಿ ಕೃಷ್ಣದರ್ಶಕ್ಕೆ ಚಾಲನೆ ನೀಡಿದರು.
ಸೋಮವಾರ ಭಕ್ತರಿಗೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರ ತನಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
* ಕೃಷ್ಣನಿಗೆ ಶುದ್ಧ ಎಳ್ಳೆಣ್ಣೆ
ಇದೇ ಸಂದರ್ಭ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಪಾದರ ಆಶಯದಂತೆ, ಭಕ್ತರು ದೇವರ ದೀಪಕ್ಕೆ ಹಾಕುತ್ತಿದ್ದ ಎಣ್ಣೆಯು ಕಲಬೆರಕೆ ಆಗದಿರಲಿ ಎಂಬ ದೃಷ್ಟಿಯಿಂದ ಎಣ್ಣೆಯ ಬದಲು ತಾವೇ ಮನೆಯಿಂದ ಎಳ್ಳು ತಂದು ಒಪ್ಪಿಸಬಹುದು ಅಥವಾ ಮಠದ ಕೌಂಟರಲ್ಲಿ ತೆಗೆದುಕೊಂಡು ದೇವರ ಮುಂಭಾಗದಲ್ಲಿ ಒಪ್ಪಿಸಿದಲ್ಲಿ ಅದನ್ನು ಗಾಣಕ್ಕೆ ಕೊಟ್ಟು ಶುದ್ಧ ಎಣ್ಣೆಯನ್ನೇ ದೇವರ ದೀಪಕ್ಕೆ ಅರ್ಪಿಸಬಹುದಾಗಿದೆ. ಇದನ್ನು ಸಾಂಕೇತಿಕವಾಗಿ ಇತರ ಮಠಾಧೀಶರು ಎಳ್ಳನ್ನು ಪರ್ಯಾಯ ಶ್ರೀಪಾದರಿಗೆ ಒಪ್ಪಿಸಿ, ಈ ಯೋಜನೆಗೆ ಚಾಲನೆ ನೀಡಿದರು.