'ಪ್ಲಾನಿಸ್ಪಿಯರ್' - ಇಲ್ಲಿದೆ ಎಲ್ಲರಿಗೂ ಆಕಾಶ ತಿಳಿಯುವ ಅವಕಾಶ
ಪಿಎಎಸಿ ಖಗೋಳಾಸಕ್ತರಿಗಾಗಿಯೇ 'ಪ್ಲಾನಿಸ್ಪಿಯರ್' ಅನ್ನು ವಿನ್ಯಾಸಗೊಳಿಸಿದ್ದು, ಇದನ್ನು ನ. 25ರಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
ಉಡುಪಿ (ನ.26): ಇಲ್ಲಿನ ಪೂರ್ಣಪ್ರಜ್ಞಾ ಹವ್ಯಾಸಿ ಖಗೋಳ ವೀಕ್ಷಕರ ಸಂಘ (ಪಿಎಎಸಿ) ವು, ಖಗೋಳಾಸಕ್ತರಿಗಾಗಿಯೇ 'ಪ್ಲಾನಿಸ್ಪಿಯರ್' ಅನ್ನು ವಿನ್ಯಾಸಗೊಳಿಸಿದ್ದು, ಇದನ್ನು ನ. 25ರಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
ಪಿಎಎಸಿ ವೆಬ್ ಸೈಟ್ ಒಂದು ವರ್ಷ ಪೂರ್ಣಗೊಳಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಶ್ರೀಗಳು ತಂಡವನ್ನು ಆಶೀರ್ವದಿಸಿದರು.
ಚಂದ್ರನಿಗೊಂದು ಸಂಗಾತಿ; ಭೂಮಿಗೆ ಮತ್ತೊಂದು ಮಿನಿ ಉಪಗ್ರಹ
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞಾ ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ., ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಸಿ. ಆಚಾರ್ಯ ಹಾಗೂ ಪಿಎಎಸಿ ಸದಸ್ಯೆ, ವಿದ್ಯಾರ್ಥಿನಿ ಶುಭಶ್ರೀ ಶಣೈ ಉಪಸ್ಥಿತರಿದ್ದರು. ಪ್ಲಾನಿಸ್ಪಿಯರ್ ಅನ್ನು ಬಳಸುವ ವಿಧಾನವನ್ನು, ವಿದ್ಯಾರ್ಥಿಗಳ ಶ್ರಮವನ್ನು ಸಂಯೋಜಕ ಪ್ರಾಧ್ಯಾಪಕ ಅತುಲ್ ಭಟ್ ಅವರು ವಿವರಿಸಿದರು.
ಏನಿದು 'ಪ್ಲಾನಿಸ್ಪಿಯರ್'
ಬಾಹ್ಯಾಕಾಶದಲ್ಲಿ ಒಟ್ಟು 88 ನಕ್ಷತ್ರ ಪುಂಜಗಳಿವೆ, ಪ್ರತಿ ತಿಂಗಳು ಅವುಗಳಲ್ಲಿ ಕೆಲವು ನಕ್ಷತ್ರ ಪುಂಜಗಳು ಕಾಣಿಸಿಕೊಳ್ಳುತ್ತವೆ. ಖಗೋಳಾಸಕ್ತರಿಗೆ ಈ ಬದಲಾವಣೆಯು ಬಹಳ ಆಸಕ್ತಿದಾಯಕವಾಗಿರುತ್ತದೆ. ಇದನ್ನು ತಿಳಿದುಕೊಳ್ಳಲು ಖಗೋಳಾಸಕ್ತರು ತಾವೇ ತಯಾರಿಸಬಹುದಾದ, ಆಕಾಶದಲ್ಲಿ ನಕ್ಷತ್ರಗಳ ಚಲನೆಯನ್ನು ಗುರುತಿಸುವ ನಕ್ಷೆ 'ಪ್ಲಾನಿಸ್ಪಿಯರ್' ಅನ್ನು ಬಳಸುತ್ತಾರೆ.
ಈ ನಕ್ಷೆ ಆಕಾಶದಲ್ಲಿರುವ ನಕ್ಷತ್ರಪುಂಜಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಪಿಎಎಸಿ ನೆಬ್ ಸೈಟಿನಲ್ಲಿ 'ಪ್ಲಾನಿಸ್ಪಿಯರ್' ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದೆ. ಆಸಕ್ತರು https://paac.ppc.ac.in/planisphereಗೆ ಭೇಟಿ ನೀಡಿ ಭಾಷೆಯನ್ನು ಆಯ್ಕೆ ಮಾಡಿ, ಪ್ಲಾನಿಸ್ಪಿಯರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ನಕ್ಷೆಯನ್ನು ತಯಾರಿಸುವ ಹಾಗೂ ಬಳಸುವ ಕುರಿತು ಮಾಹಿತಿಯನ್ನು ನೀಡಲಾಗಿದೆ