ಉಡುಪಿ(ಸೆ.23): ಜಿಲ್ಲೆಯ ಸಿಆರ್‌ಝಡ್‌ (ಕರಾವಳಿ ನಿಯಂತ್ರಣ ವಲಯ) ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸುವಾಗ ಲಭ್ಯವಾಗುವ ಮರಳಿಗೆ ಉಡುಪಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ದರ ನಿಗದಿಪಡಿಸಿದೆ. 10 ಮೆಟ್ರಿಕ್‌ ಟನ್‌(ಮೂರು ಯುನಿಟ್‌) ಮರಳು 5,500 ರು.ಗಳಿಗೆ ಲಭ್ಯವಾಗಲಿದೆ.

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯಲ್ಲಿ ಮರಳು ದರ ಮತ್ತು ಸಾಗಾಟ ದರವನ್ನು ನಿಗದಿಗೊಳಿಸಲಾಯಿತು. ಅದಕ್ಕೂ ಮೊದಲು ಹೊಯ್ಗೆ ದೋಣಿ ಕಾರ್ಮಿಕರ ಸಂಘ ಮತ್ತು ಲಾರಿ ಮಾಲೀಕರ ಸಂಘ ಪದಾಧಿಕಾರಿಗಳಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು.

ಪೇಜಾವರ ಶ್ರೀ ಶಿಷ್ಯ ಡಿಪಿ ಅನಂತ್ ಟಿಟಿಡಿ ಸದಸ್ಯರಾಗಿ ನೇಮಕ

ಮೆಟ್ರಿಕ್‌ ಟನ್‌ಗೆ 550 ರು:

ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ತೆಗೆಯುವ ಮರಳು ಧಕ್ಕೆಯಲ್ಲಿ ಒಂದು ಮೆಟ್ರಿಕ್‌ ಟನ್‌ಗೆ 550 ರು. ದರ ನಿಗದಿಪಡಿಸಲಾಗಿದೆ. ಅದೇ ರೀತಿ ಮೂರು ಯುನಿಟ್‌ (10 ಮೆಟ್ರಿಕ್‌ ಟನ್‌) ಮರಳು 5,550 ರು.ಗಳಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಇದರಲ್ಲಿ ಸರ್ಕಾರದ ರಾಜಸ್ವವೂ ಸೇರಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮರಳು ಸಾಗಾಟಕ್ಕೂ ದರ ನಿಗದಿ:

ಲಾರಿಯಲ್ಲಿ 20 ಕಿ.ಮೀ. ವ್ಯಾಪ್ತಿಯಲ್ಲಿ ಮರಳು ಸಾಗಾಟಕ್ಕೆ 2,500 ರು. ದರ ನಿಗದಿಗೊಳಿಸಲಾಗಿದೆ. ನಂತರದ ಪ್ರತೀ ಕಿ.ಮೀ.ಗೆ 50 ರು. ಹೆಚ್ಚುವರಿ ದರ ನಿಗದಿಯಾಗಿದೆ. ಅದೇ ರೀತಿ ಟೆಂಪೊ (407)ದಲ್ಲಿ 4 ಮೆಟ್ರಿಕ್‌ ಟನ್‌ ಮರಳು ಸಾಗಾಟಕ್ಕೆ 20 ಕಿ.ಮೀ. ವ್ಯಾಪ್ತಿಗೆ 1500 ರೂ. ಮೊತ್ತ ಹಾಗೂ ನಂತರದ ಪ್ರತೀ ಕಿ.ಮೀ.ಗೆ 35 ರು. ಹೆಚ್ಚುವರಿ ದರವನ್ನು ನಿಗದಿ ಗೊಳಿಸಲಾಗಿದೆ.

ಉಡುಪಿ ಜಿಲ್ಲಾ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

158 ಮಂದಿಯಿಂದ ಪರವಾನಗಿಗೆ ಅರ್ಜಿ

ಜಿಲ್ಲಾ ಏಳು ಸದಸ್ಯರ ಸಮಿತಿಯಿಂದ ಮರಳು ದಿಬ್ಬ ತೆರವಿಗೆ 158 ಮಂದಿ ಪರವಾನಗಿದಾರರನ್ನು ಗುರುತಿಸಲಾಗಿತ್ತು. ಶುಕ್ರವಾರ ಸಂಜೆ ವರೆಗೆ ಅರ್ಹತೆ ಇರುವ ಎಲ್ಲ 158 ಮಂದಿಯೂ ದಾಖಲೆ ಸಹಿತ ಅರ್ಜಿಯನ್ನು ಸಲ್ಲಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿರುವ 68 ಮಂದಿ ಪರವಾನಗಿದಾರರು ತಮಗೆ ವಿಧಿಸಿರುವ ದಂಡವನ್ನು ಪಾವತಿಸಿದ್ದಾರೆ. ಎರಡು ದಿನಗಳಲ್ಲಿ ಈ ಅರ್ಜಿಗಳ ಪರಿಶೀಲನೆ ನಡೆಸಿ ಮತ್ತೆ ಏಳು ಸದಸ್ಯರ ಸಮಿತಿ ಮುಂದೆ ಅರ್ಜಿಗಳು ಬರಲಿವೆ.