ಲೋಕಾಪುರ(ಮಾ.04): ಮದುವೆ ಕಾರ್ಯ ಮುಗಿಸಿಕೊಂಡು ವಾಪಸ್‌ ಹೋಗುತ್ತಿದ್ದ ಟೆಂಪೋ ಟ್ರಾವೆಲ್ಸ್‌ವೊಂದು ಟ್ರ್ಯಾಕ್ಟರ್‌ ಓವರ್‌ಟೇಕ್‌ ಮಾಡಲು ಹೋಗಿ ಹೈಟೆನ್ಷನ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಬಳಿ ಇರುವ ಐಸಿಪಿಎಲ್‌ ಕಾರ್ಖಾನೆ ಹತ್ತಿರ ಬುಧವಾರ ರಾತ್ರಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯಾದವಾಡ ಗ್ರಾಮದ ಈರವ್ವ ಸಿದ್ದಪ್ಪ ಗಾಣಿಗೇರ, ಅನ್ನವ್ವ ಗಾಣಿಗೇರ ಸಜೀವ ದಹನವಾದವರು. ಟೆಂಪೋನಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು 20 ಮಂದಿ ಪೈಕಿ ಇಬ್ಬರು ಸಜೀವ ದಹನವಾದರೆ ಉಳಿದ 18 ಜನರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

'ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟು ಮಾಡಿದ ಪ್ರಧಾನಿ: ಮೋದಿ ಹೇಳಿದ ಅಚ್ಚೇದಿನ್‌ ಎಲ್ಲಿದೆ?'

ಘಟನೆ ಹೇಗೆ ನಡೆಯಿತು?:

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮಕ್ಕೆ ಮದುವೆಗೆಂದು ಹೋಗಿದ್ದರು. ಮದುವೆ ಕಾರ್ಯ ಮುಗಿಸಿಕೊಂಡು ವಾಪಸ್‌ ಗೋಕಾಕ ತಾಲೂಕಿನ ಯಾದವಾಡ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್‌ ಓವರ್‌ಟೇಕ್‌ ಮಾಡಲು ಹೋದಾಗ ಟ್ರ್ಯಾಕ್ಟರ್‌ ಟ್ರೈಲರ್‌ನ ಹಿಂಬದಿ ಬಡಿದು ರಸ್ತೆ ಲೋಕಾಪುರದ ಐಸಿಪಿಎಲ್‌ ಕಾರ್ಖಾನೆ ಬಳಿ ಇದ್ದ ಹೈಟೆನ್ಷನ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ವಿದ್ಯುತ್‌ ತಂತಿ ತುಂಡರಿಸಿ ಟಿಟಿ ವಾಹನದ ಮೇಲೆ ಬಿದ್ದಿದೆ. ಇದರಿಂದ ಕ್ಷಣಾರ್ಧದಲ್ಲಿಯೇ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿತು. ಅದರಲ್ಲಿದ್ದ 18 ಜನರು ವೇಗವಾಗಿ ಇಳಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಈರವ್ವ ಸಿದ್ದಪ್ಪ ಗಾಣಿಗೇರ ಮತ್ತು ಅನ್ನವ್ವ ಗಾಣಿಗೇರ ಟೆಂಪೋನಲ್ಲಿಯೇ ಸಜೀವ ದಹನವಾದರು ಎಂದು ತಿಳಿದುಬಂದಿದೆ.

ನಂತರ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದೆ. ಲೋಕಾಪುರ ಪಿಎಸ್‌ಐ ಶಂಕರ ಮುಕ್ರಿ ಸೇರಿದಂತೆ ಇತರರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಈ ಕುರಿತು ಲೋಕಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.