ಬೆಂಗಳೂರು[ಡಿ.08]:  ಐಪಿಎಸ್‌ ಅಧಿಕಾರಿಗಳ ಹೆಸರಿನಲ್ಲಿ ವ್ಯಾಪಾರಿಯೊಬ್ಬರಿಗೆ ಬೆದರಿಕೆ ಹಾಕಿ ಹಣ ಸುಲಿಗೆಗೆ ಯತ್ನಿಸಿದ ಇಬ್ಬರು ಕಿಡಿಗೇಡಿಗಳು ಎಸ್‌.ಜೆ.ಪಾರ್ಕ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಎನ್‌.ಆರ್‌.ಕಾಲೋನಿ ನಿವಾಸಿ ಭರತ್‌ ಕುಮಾರ್‌ ಅಲಿಯಾಸ್‌ ಐಪಿಎಸ್‌ ಭರತ್‌ ಹಾಗೂ ಆತನ ಸಹಚರ ಚಿಕ್ಕಪೇಟೆಯ ಕಿಶನ್‌ ಅಲಿಯಾಸ್‌ ಆನಂದ್‌ ಬಂಧಿತರು. ಆರೋಪಿಗಳಿಂದ ಐಪಿಎಸ್‌ ಅಧಿಕಾರಿ ಹೆಸರಿನ ವಿಸಿಟಿಂಗ್‌ ಕಾರ್ಡ್‌ ಹಾಗೂ ಮೊಬೈಲ್‌ ಜಪ್ತಿ ಮಾಡಲಾಗಿದೆ.

ಆರೋಪಿಗಳು ಕೆಲ ದಿನಗಳಿಂದ ಎಸ್‌.ಪಿ.ರಸ್ತೆಯಲ್ಲಿ ಎಲೆಕ್ಟ್ರಿಕ್‌ ಅಂಗಡಿ ಹೊಂದಿರುವ ಶ್ರವಣ್‌ ಕುಮಾರ್‌ ಎಂಬುವರಿಗೆ ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣ ದಾಖಲಿಸುವುದಾಗಿ ಬೆದರಿಸಿ 1 ಲಕ್ಷ ರು. ಹಣ ಸುಲಿಗೆ ಯತ್ನಿಸಿದ್ದರು. ಈ ಕಿರುಕುಳ ಸಹಿಸಲಾರದೆ ಶ್ರವಣ್‌ ಕುಮಾರ್‌ ಅವರು ಎಸ್‌.ಜೆ.ಪಾರ್ಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ವಂಚಕರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಲಭವಾಗಿ ಹಣ ಸಂಪಾದನೆ ಸಂಚು:

ಯಾವುದೇ ಕೆಲಸವಿಲ್ಲದೆ ಅಲೆಯುತ್ತಿದ್ದ ಭರತ್‌, ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಹೆಸರಿನಲ್ಲಿ ವ್ಯಾಪಾರಿಗಳನ್ನು ಬೆದರಿಸಿ ಸುಲಭವಾಗಿ ಹಣ ಸಂಪಾದಿಸಲು ಸಂಚು ರೂಪಿಸಿದ್ದ. ಇತ್ತಿಚೆಗೆ ವಿ.ವಿ.ಪುರ ನಿವಾಸಿ ಶ್ರವಣ್‌ ಕುಮಾರ್‌ಗೆ ಕರೆ ಮಾಡಿ ತಾನು ಐಪಿಎಸ್‌ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನಂತರ ‘ನೀನು ಕ್ರಿಕೆಟ್‌ ಬೆಟ್ಟಿಂಗ್‌ ಆಡುತ್ತಿರುವುದು ಗೊತ್ತಾಗಿದೆ. ನಿನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಬಾರದು ಎಂದರೆ ನನಗೆ ಒಂದು ಲಕ್ಷ ರು. ಕೊಡಬೇಕು’ ಎಂದು ಬೇಡಿಕೆ ಇಟ್ಟಿದ್ದ. ಪದೇ ಪದೆ ಶ್ರವಣ್‌ಗೆ ಫೋನ್‌ ಮಾಡಿ ಹಣಕ್ಕಾಗಿ ಭರತ್‌ ಭರತ್‌ ಪೀಡಿಸುತ್ತಿದ್ದ.

ಇದಕ್ಕೆ ಶ್ರವಣ್‌ ಸ್ಪಂದಿಸಿದ್ದಾಗ, ಡಿ.2ರಂದು ಎಸ್‌.ಪಿ.ರಸ್ತೆಯಲ್ಲಿರುವ ಶ್ರವಣ್‌ ಅವರ ಅಂಗಡಿಗೆ ತೆರಳಿದ ಭರತ್‌ ಹಣ ನೀಡುವಂತೆ ತಾಕೀತು ಮಾಡಿದ್ದ. ಆಗ ಶ್ರವಣ್‌ ಹಣವಿಲ್ಲವೆಂದಾಗ ಹಿಂದಿರುಗಿದ್ದ ಭರತ್‌, ಮರುದಿನ ತನ್ನ ಸಹಚರ ಕಿಶನ್‌ ಜತೆ ಬಂದು ಹಣಕ್ಕಾಗಿ ಒತ್ತಾಯಿಸಿ ಜಗಳ ಮಾಡಿದ್ದ.

ಇದರಿಂದ ಕೆರಳಿದ ಶ್ರವಣ್‌, ಎಸ್‌.ಜೆ.ಪಾರ್ಕ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಪೊಲೀಸರೆಂದು ಹೇಳಿ ಬೆದರಿಸಿದರೆ ಹಣ ಸಿಗಬಹುದೆಂದು ಉದ್ದೇಶದಿಂದ ಈ ಕೃತ್ಯ ಎಸಗಿದೆ. ಹಣದಾಸೆ ತೋರಿಸಿ ಸ್ನೇಹಿತ ಕಿಶನ್‌ ನೆರವು ಪಡೆದಿದ್ದೆ ಎಂದು ವಿಚಾರಣೆ ವೇಳೆ ಭರತ್‌ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.