ಕೊರೋನಾ ವೈರಸ್: ವಿದೇಶದಿಂದ ಬಂದ ಇಬ್ಬರು ಬೀದರ್ ಜಿಲ್ಲಾಸ್ಪತ್ರೆಗೆ ದಾಖಲು
ಜಿಲ್ಲಾ ಆಸ್ಪತ್ರೆ ವಿಶೇಷ ವಾರ್ಡ್‌ನಲ್ಲಿ ಮೂವರ ರಕ್ತ ತಪಾಸಣೆ, ಇಬ್ಬರಿಗೆ ಚಿಕಿತ್ಸೆ| , ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರು ಶಂಕಿತ ರೋಗಿಗಳ ರಕ್ತ ಹಾಗೂ ಕಫದ ಮಾದರಿ ಎನ್‌ಐವಿ ಬೆಂಗಳೂರು ಅಥವಾ ಎನ್‌ಐವಿ ಪೂನಾಕ್ಕೆ ರವಾನೆ|
ಬೀದರ್(ಮಾ.05): ನೆರೆಯ ಹೈದ್ರಾಬಾದ್‌ನಲ್ಲಿ ಅಪಾಯಕಾರಿ ಕೊರೋನಾ ವೈರಸ್ ರೋಗಾಣು ಪತ್ತೆಯಾಗಿರುವ ಬೆನ್ನಲ್ಲಿಯೇ ಕೆಲ ದಿನಗಳ ಹಿಂದಷ್ಟೇ ವಿದೇಶದಿಂದ ಜಿಲ್ಲೆಗೆ ಆಗಮಿಸಿರುವ ಇಬ್ಬರು ಸೇರಿದಂತೆ ಒಟ್ಟು ಮೂವರಿಗೆ ಕೊರೋನಾ ವೈರಸ್ ತಗುಲಿರುವ ಶಂಕೆಯ ಆಧಾರದ ಮೇಲೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ.
ಜಿಲ್ಲೆಯ ಔರಾದ್ ಮೂಲದ ಹಣಮಂತ ಗಣಪತಿ, ನಾರ್ವೆಯಿಂದ ಫೆ. 13ರಂದು ಬೆಂಗಳೂರಿಗೆ ಬಂದು ಫೆ. 16ರಂದು ಬೀದರ್ ಯಶವಂತಪುರ ರೈಲು ಮೂಲಕ ಔರಾದ್‌ಗೆ ಆಗಮಿಸಿದ್ದು ತದನಂತರ ಅವರು ಶ್ರೀಶೈಲಂ, ತಿರುಪತಿ, ಕಾಳಹಸ್ತಿ ನಂತರ ಔರಾದ್‌ಗೆ ವಾಪಸ್ಸಾದ ನಂತರ ಅವರಲ್ಲಿ ಕೆಮ್ಮು ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾ ಆಸ್ಪತ್ರೆಯ ವಿಶೇಷ ವಾರ್ಡನಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸಲಾಗಿದ್ದು ಅವರ ರಕ್ತದ ಹಾಗೂ ಕಫದ ಮಾದರಿಯನ್ನು ಹೆಚ್ಚಿನ ತಪಾಸಣೆಗೆ ಕಳುಹಿಸಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ಔರಾದ್ ತಾಲೂಕಿನ ಚಟ್ನಾಳ ಗ್ರಾಮದ ಶಿವಕುಮಾರ ನರಸಪ್ಪ ಎಂಬುವವರು ಫೆ. 24ರಂದು ಕತಾರ್‌ದಿಂದ ಆಗಮಿಸಿದ್ದು ಅವರ ಪುತ್ರ ಮಹಾವೀರ ಶಿವಕುಮಾರ (14) ಎಂಬುವವರಿಗೆ ಕೆಮ್ಮು ನೆಗಡಿ ಕಾಣಿಸಿಕೊಂಡಿದ್ದರಿಂದ ತಂದೆ ಹಾಗೂ ಮಗನನ್ನು ಜಿಲ್ಲಾ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಹಾಗೂ ಹೆಚ್ಚಿನ ತಸಾಪಣೆಗೆ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ. ರತಿಕಾಂತ ಸ್ವಾಮಿ ತಿಳಿಸಿದ್ದಾರೆ.
ಬೀದರ್ ಏರ್‌ಪೋರ್ಟ್, ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದಲ್ಲಿ ಹೈದ್ರಾಬಾದ್, ಬೆಂಗಳೂರು ಸೇರಿದಂತೆ ಕೊರೋನಾ ವೈರಸ್ ಶಂಕಿತ ರೋಗಿಗಳು ಕಂಡುಬಂದಿರುವ ಪ್ರದೇಶಗಳಿಂದ ಬರುವವರ ಬಗ್ಗೆ ಮಾಹಿತಿ ಪಡೆದು ಅವರು ಆಗಮಿಸುತ್ತಿರುವ ಕಡೆಗೆ ತೆರಳಿ ಅವರಿಗೆ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ, ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಜಿಲ್ಲಾ ಸಾಂಕ್ರಾಮಿಕ ರೋಗ ತಜ್ಞ ನಿಂಗನಗೌಡ ಎನ್ ಬಿರಾದರ್ ಅವರು ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೂವರು ಶಂಕಿತ ರೋಗಿಗಳ ರಕ್ತ ಹಾಗೂ ಕಫದ ಮಾದರಿಗಳನ್ನು ಎನ್‌ಐವಿ ಬೆಂಗಳೂರು ಅಥವಾ ಎನ್‌ಐವಿ ಪೂನಾಕ್ಕೆ ಕಳುಹಿಸಲಾಗುತ್ತಿದೆ. ಸಧ್ಯಕ್ಕೆ ಜಿಲ್ಲೆಯಲ್ಲಿ ಕೊರೋನಾ ಬಹುತೇಕ ಶಂಕಿತ ರೋಗಿಗಳು ಕಂಡುಬಂದಿಲ್ಲ ಎಂದಿದ್ದಾರೆ.