ಮಂಗಳೂರು(ಏ.05): ದ.ಕ. ಜಿಲ್ಲೆಯಲ್ಲಿ ಶನಿವಾರ ಮೂರು ಕೊರೋನಾ ಪಾಸಿಟಿವ್‌ ಕೇಸ್‌ಗಳು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಪೈಕಿ ದೆಹಲಿಗೆ ತೆರಳಿ ಮರ​ಳಿದ್ದ ಇಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇನ್ನೋರ್ವ ಮಹಿಳೆಗೂ ಸೋಂಕು ತಗುಲಿದೆ.

ಉಡುಪಿ ಜಿಲ್ಲೆಯ ಕಾರ್ಕಳ ಕುಕ್ಕುಂದೂರು ಮೂಲದ 68ರ ಹರೆ​ಯದ ಮಹಿ​ಳೆ ಮಾ.21ರಂದು ದುಬೈನಿಂದ ಆಗಮಿಸಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇದ್ದರು. ಇದೀಗ ಗಂಟಲು ದ್ರವದ ಪರೀಕ್ಷೆಯಲ್ಲಿ ಕೋವಿಡ್‌-19 ವೈರಸ್‌ ತಗಲಿರುವುದು ದೃಢಪಟ್ಟಿದೆ. ಅವರನ್ನು ವೆನ್ಲಾಕ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

SSLC ಹೊರತುಪಡಿಸಿ ಪರೀಕ್ಷೆ ಇಲ್ಲದೇ ಎಲ್ಲಾ ವಿದ್ಯಾರ್ಥಿಗಳು ಪಾಸ್..!

ಇನ್ನಿಬ್ಬರು ದ.ಕ.​ಜಿ​ಲ್ಲೆ​ಯ​ವರು ದೆಹ​ಲಿಗೆ ಪ್ರಯಾ​ಣಿಸಿ ಮರ​ಳಿ​ದ್ದ​ವರು. ಇವರು ನಿಜಾ​ಮು​ದ್ದೀನ್‌ ತಬ್ಲೀಘಿ ಸಮಾ​ವೇ​ಶ​ದಲ್ಲಿ ಭಾಗಿ​ಗಳು ಎಂದು ಆರೋಗ್ಯ ಇಲಾಖೆ ಪ್ರಕ​ಟಿ​ಸಿದ ಪಟ್ಟಿ​ಯಲ್ಲಿ ಉಲ್ಲೇಖಿ​ಸ​ಲಾ​ಗಿ​ದೆ. ಇವರಲ್ಲಿ ಬಂಟ್ವಾಳದ ತುಂಬೆಯ 43 ವರ್ಷದ ವ್ಯಕ್ತಿಯಾಗಿದ್ದಾರೆ. ಮಾ.11ರಂದು ದೆಹಲಿಗೆ ಪ್ರಯಾಣಿಸಿದ ಅವರು ಮಾ.22ರಂದು ವಾಪಸ್‌ ಬಂದಿದ್ದರು. ಅವರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು. ಇನ್ನೊಬ್ಬರು 52 ವರ್ಷದ ತೊಕ್ಕೊಟ್ಟು ನಿವಾಸಿ. ಫೆ.2ರಂದು ಮುಂಬೈಗೆ ಹೋದವರು ಅಲ್ಲಿಂದ ದೆಹಲಿಗೆ ತೆರಳಿದ್ದರು. ಮಾ.20ರಂದು ದೆಹಲಿಯಿಂದ ಮಂಗಳೂರಿಗೆ ಆಗಮಿಸಿದ್ದರು. ಇಬ್ಬರನ್ನೂ ಕೂಡ ವೆನ್ಲಾಕ್‌ ಆಸ್ಪತ್ರೆಗೆ ಸೇರಿಸಲಾಗಿದೆ.

ಕೊರೋನಾ: ಡಾಕ್ಟರ್ ಕಷ್ಟ ಸಚಿವರ ಅನುಭವಕ್ಕೆ ಬಂತು, ಅದನ್ನು ಜನರ ಮುಂದೆ ಇಟ್ರು..!

ದೆಹಲಿ ಸಮಾವೇಶಕ್ಕೆ ದ.ಕ. ಜಿಲ್ಲೆಯಿಂದ 33ಕ್ಕೂ ಅಧಿಕ ಮಂದಿ ತೆರಳಿದ್ದಾರೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಕಲೆ ಹಾಕಿದೆ. ಈ ಪೈಕಿ 28 ಮಂದಿಯನ್ನು ಪ್ರತ್ಯೇಕವಾಗಿ ದೇರಳಕಟ್ಟೆಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿತ್ತು. ಇದರಲ್ಲಿ ಇಬ್ಬರ ಗಂಟಲು ದ್ರವ ಪರೀಕ್ಷೆ ವರದಿ ಶುಕ್ರವಾರ ಬಂದಿದ್ದು, ನೆಗೆಟಿವ್‌ ಆಗಿತ್ತು. ಶನಿವಾರ ಇಬ್ಬರ ವರದಿ ಪಾಸಿಟಿವ್‌ ಬಂದಿದೆ. ಉಳಿದವರ ವರದಿ ಬರಬೇಕಾಗಿದೆ. ಇನ್ನೂ 15 ಮಂದಿಯ ಪತ್ತೆಕಾರ್ಯ ನಡೆಯುತ್ತಿದೆ. ಅವರು ಇದುವರೆಗೆ ಜಿಲ್ಲೆಗೆ ಆಗಮಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ದ.ಕ.: ಒಟ್ಟು 12 ಪಾಸಿಟಿವ್‌

ದ.ಕ.ಜಿಲ್ಲೆಯಲ್ಲಿ ಶನಿವಾರ 3 ಪ್ರಕರಣ ಪಾಸಿಟಿವ್‌ ಆಗುವುದರೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 12 ತಲುಪಿದೆ. ಮೊದಲ ಪ್ರಕರಣ ಭಟ್ಕಳ ಮೂಲದವನದ್ದಾದರೆ, ನಂತರದ ನಾಲ್ಕು ಪ್ರಕರಣ ಕಾಸರಗೋಡು ಮೂಲದ್ದು. ಬಳಿಕ ಸುಳ್ಯದ ಅಜ್ಜಾವರ, ಪುತ್ತೂರಿನ ಸಂಪ್ಯ, ಬೆಳ್ತಂಗಡಿಯ ಕರಾಯ ಹಾಗೂ ಬಂಟ್ವಾಳದ ಸಜಿಪ ಮೂಲಗಳ ತಲಾ ಒಂದು ಪ್ರಕರಣ ಪತ್ತೆಯಾಗಿತ್ತು. ಇವರೆಲ್ಲರೂ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ಶಂಕಿತ 28 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಹೊಸದಾಗಿ 5 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಇದುವರೆಗೆ 310 ಸ್ಯಾಂಪಲ್‌ ಪೈಕಿ 279 ಸ್ಯಾಂಪಲ್‌ ವರದಿ ಬಂದಿದೆ. 267 ಸ್ಯಾಂಪಲ್‌ ನೆಗೆಟಿವ್‌ ಆಗಿದೆ. ಈವರೆಗೆ 1,057 ಮಂದಿ 28 ದಿನಗಳ ಮನೆಯ ನಿಗಾ ಪೂರೈಸಿದ್ದು, ಅವರಲ್ಲಿ ಯಾವುದೇ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಪ್ರಸಕ್ತ ಇಎಸ್‌ಐ ಆಸ್ಪತ್ರೆಯಲ್ಲಿ 17 ಮಂದಿ ನಿಗಾದಲ್ಲಿ ಇದ್ದಾರೆ. ಇಲ್ಲಿವರೆಗೆ 4,629 ಮಂದಿ ಮನೆಯ ನಿಗಾಕ್ಕೆ ಒಳಗಾದಂತಾಗಿದೆ. ಶನಿವಾರ ಒಂದೇ ದಿನ 27 ಮಂದಿಯ ಸ್ಕ್ರೀನಿಂಗ್‌ ನಡೆಸಲಾಗಿದೆ. ಒಟ್ಟು ಸ್ಕ್ರೀನಿಂಗ್‌ಗೆ ಒಳಗಾದವರು ಇದುವರೆಗೆ 38,545 ಮಂದಿ.

520 ಮನೆ​ಗಳ ನಿವಾ​ಸಿ​ಗ​ಳಿಗೆ ಕ್ವಾರಂಟೇ​ನ್‌

ಬಂಟ್ವಾಳದ ತುಂಬೆ ಗ್ರಾಮದಲ್ಲಿ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮದ ಮೂರು ಪ್ರದೇಶಗಳ ಸುಮಾರು 520 ಮನೆಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಗ್ರಾಮದ ಮದಕ, ಬೊಳ್ಳಾರಿ ಹಾಗೂ ತುಂಬೆ ಜಂಕ್ಷನ್‌ನ ಮನೆಗಳಲ್ಲಿ ವಾಸ್ತವ್ಯವಿರುವ ಸುಮಾರು 3 ಸಾವಿರ ಮಂದಿಗೆ ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿದ್ದು, ಯಾರೂ ಈ ಗ್ರಾಮದತ್ತ ಸುಳಿಯದಂತೆ ಮಧ್ಯಾಹ್ನ 12 ಗಂಟೆಯಿಂದ ರಸ್ತೆಗಳನ್ನು ಬಂದ್‌ ಮಾಡಿ, ಅಲ್ಲಲ್ಲಿ ನಾಕಾಬಂದಿ ಏರ್ಪಡಿಸಲಾಗಿದೆ. ಸೋಂಕಿತ ವ್ಯಕ್ತಿಯ ಮನೆ ಮಂದಿಯನ್ನೂ ಬೇರೆ ಕಡೆಗೆ ವರ್ಗಾಯಿಸಿ ವಿಶೇಷ ನಿಗಾವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಬಂಟ್ವಾಳ ತಹಸೀಲ್ದಾರ್‌ ರಶ್ಮೀ ಎಸ್‌.ಆರ್‌. ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿನೀಡಿ ಅಗತ್ಯ ಮುನ್ನೆಚ್ಚರಿಕೆಗಳನ್ನು ನೀಡಿದ್ದಾರೆ. ಯಾರೂ ಮನೆಯಿಂದ ಹೊರ ಬಾರದಂತೆ ಪೊಲೀಸರು ಧ್ವನಿವರ್ಧಕ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ ನೀಡುತ್ತಿದ್ದು, ಗ್ರಾಮದ ಪ್ರಮುಖರನ್ನು ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ಸಂಪರ್ಕಿಸಿದ್ದು ಗ್ರಾಮದಲ್ಲಿ ಮುಂದೆ ನಡೆಸಬೇಕಾದ ಕ್ರಮದ ಬಗ್ಗೆಯೂ ಚರ್ಚಿಸಿದ್ದಾರೆ.