ಯಾದಗಿರಿ, (ಸೆ.28): ಹೊಲದ ಬದಿಯಲ್ಲಿ ಹಾಕಿದ್ದ ತಂತಿ ಬೇಲಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ರೈತರಿಬ್ಬರು ಹಾಗೂ ಎತ್ತೊಂದು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ  ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿ -ಶಿವನೂರು ಸಮೀಪ ಸೋಮವಾರ ಸಂಜೆ ನಡೆದಿದೆ.

ಎತ್ತು ರಕ್ಷಣೆಗೆ ತೆರಳಿದ್ದ ಬಸಪ್ಪ (30) ಮೌಲಾಲಿ (28) ಮೃತ ದುರ್ದೈವಿಗಳು. ಬೆಂಡೆಬೆಂಬಳಿ ಗ್ರಾಮದ ಬಸವರಾಜ ಪೂಜಾರಿ ಜಾನುವಾರುಗಳನ್ನು ಮೇಯಿಸಿಕೊಂಡು ಮನೆಗೆ ವಾಪಸಾಗುತ್ತಿದ್ದರು. 

ಈ ವೇಳೆ ಅವರಿಗೆ ಸೇರಿದ  ಎತ್ತೊಂದು ರಸ್ತೆಬದಿಯ ಹೊಲಕ್ಕ ಅಂಟಿಕೊಂಡಂತೆ ಹಾಕಿದ್ದ ತಂತಿ ಬೇಲಿ ಸಿಲುಕಿ ಒದ್ದಾಡುತ್ತಿರುವುದನ್ನು ಕಂಡಿದ್ದಾರೆ. ತಂತಿ ಬೇಲಿಗೆ ಸಮೀಪದಲ್ಲಿ ಹಾದು ಹೋಗಿದ್ದ ವಿದ್ಯುತ್ ವೈರಗಳು ಸ್ಪರ್ಶಿಸಿದ್ದರ ಅರಿವು ಇರದೇ ಎತ್ತನ್ನು ಸರಿಸಲು ಹೋದ ಬಸವರಾಜ್ ಅವರಿಗೂ ಸಹ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಒದ್ದಾಡುತ್ತಿದ್ದರು. 

ಇದನ್ನು ಕಂಡು ಬಸವರಾಜ ಜೊತೆಯಲ್ಲಿ ಸಾಗುತ್ತಿದ್ದ ಇದೇ ಗ್ರಾಮದ ಮೌಲಾಲಿ ಇವರಿಬ್ಬರ ಸಹಾಯಕ್ಕೆಂದು ತೆರಳಿದಾಗ ಅವರಿಗೂ ಸಹ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. 

ಈ ಘಟನೆ ನಂತರ ಆತಂಕಗೊಂಡ ಗ್ರಾಮಸ್ಥರು ಜೆಸ್ಕಾಂ ಸಿಬ್ಬಂದಿಗಳಿಗೆ ಫೋನಾಯಿಸಿದಾಗ ಸಮಯಕ್ಕೆ ಸರಿಯಾಗಿ ಬಾರದಿದ್ದ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.