ಹಾವೇರಿ(ಏ.20):  ಇದುವರೆಗೆ ಕೊರೋನಾ ಮುಕ್ತ ಎನಿಸಿದ್ದ ಜಿಲ್ಲೆಯಲ್ಲಿ ಸಣ್ಣ ಆತಂಕ ಶುರುವಾಗಿದೆ. ವಿಜಯಪುರದಲ್ಲಿ ಪತ್ತೆಯಾದ ಇಬ್ಬರು ಕೊರೋನಾ ಪಾಸಿಟಿವ್‌ ಸೋಂಕಿತರು ಹಾನಗಲ್ಲ ತಾಲೂಕಿನ ಆಡೂರು ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು ಎಂಬ ಮಾಹಿತಿ ಮೇರೆಗೆ ಆ ಕುಟುಂಬದ 21 ಜನರನ್ನು ಭಾನುವಾರ ಕ್ವಾರಂಟೈನ್‌ ಮಾಡಲಾಗಿದೆ.

ವಿಜಯಪುರದ ಕೊರೋನಾ ಪಾಸಿಟಿವ್‌ ಇರುವ ಪಿ-306 ಮತ್ತು ಪಿ-308 ಎಂಬುವವರು ಏ. 5ರಂದು ಆಡೂರಿನ ಸಂಬಂಧಿಕರ ಮನೆಗೆ ಬಂದು ಊಟ ಮಾಡಿ ಹೋಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಆಡೂರು ಪೊಲೀಸ್‌ ಠಾಣೆ ಪಿಎಸ್‌ಐ ಆಂಜನೇಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆ ಕುಟುಂಬದ ಎರಡು ಮನೆಗಳಿಗೆ ಸೇರಿದ 21 ಜನರನ್ನು ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊರೋನಾ ಶಂಕಿತನಿಂದ ಆಸ್ಪತ್ರೆ ಸಿಬ್ಬಂದಿಗೆ ಕಿರಿಕ್‌: ಹೈರಾಣಾದ ವೈದ್ಯರು!

ಹೇಗೆ ಬಂದರು?:

ಲಾಕ್‌ಡೌನ್‌ ಇದ್ದರೂ ಹೊರ ಜಿಲ್ಲೆಗಳಿಂದ ಇಲ್ಲಿಗೆ ಅವರು ಹೇಗೆ ಬಂದರು? ಎಂಬ ಬಗ್ಗೆ ಸಾರ್ವಜನಿಕರು ಚರ್ಚಿಸುತ್ತಿದ್ದಾರೆ. ಕ್ಯಾನ್ಸರ್‌ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಹೋಗಲು ಈ ಇಬ್ಬರು ಪಾಸ್‌ ಪಡೆದಿದ್ದರು. ಪಾಸ್‌ ಪಡೆದ ಇವರು ಬೆಂಗಳೂರಿಗೆ ಹೋಗಿ ತಪಾಸಣೆ, ಔಷಧಿ ಪಡೆದು ವಿಜಯಪುರಕ್ಕೆ ಹೋಗುವಾಗ ಪಿ-306 ಮಾವನ ಮನೆ ಇರುವ ಆಡೂರಿಗೆ ಬಂದು ಊಟು ಮಾಡಿ ಹೋಗಿದ್ದಾರೆ. ಈ ಎರಡು ರೋಗಿಗಳ ಟ್ರಾವೆಲ್‌ ಹಿಸ್ಟರಿ ಗಮನಿಸಿದಾಗ ಅವರು ಆಡೂರಿಗೆ ಬಂದು ಹೋಗಿರುವುದು ಗೊತ್ತಾಗಿದೆ. ಸೋಂಕಿತರು ಭೇಟಿ ನೀಡಿದ ಈ ಕುಟುಂಬಗಳಿಗೆ ಸೇರಿದ ಎರಡೂ ಮನೆಗಳ ಬಳಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದೆ ಎಂದು ಆಡೂರು ಪೊಲೀಸ್‌ ಠಾಣೆ ಪಿಎಸ್‌ಐ ಆಂಜನೇಯ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ವಿಜಯಪುರದ ಕೊರೋನಾ ಸೋಂಕಿತರು 14 ದಿನಗಳ ಹಿಂದೆ ಅಂದರೆ ಏ. 5ರಂದು ಆಡೂರಿನ ಸಂಬಂಧಿಕರ ಮನೆಗೆ ಬಂದು ಊಟ ಮಾಡಿ ಹೋಗಿದ್ದಾರೆ. ಕುಟುಂಬದ ಯಾವ ಸದಸ್ಯರಲ್ಲಿಯೂ ಮೇಲ್ನೊಟಕ್ಕೆ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಕುಟುಂಬದ ಎಲ್ಲ ಸದಸ್ಯರನ್ನು ಕ್ವಾರಂಟೈನ್‌ ಮಾಡಲಾಗಿದ್ದು, ಅವರ ರಕ್ತ ಮತ್ತು ಗಂಟಲುದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ಹೇಳಿದ್ದಾರೆ.