ಬೆಂಗಳೂರು [ಸೆ.11]:   ಸಹದ್ಯೋಗಿಗಳ ಪಾಸ್‌ವರ್ಡ್‌ ಕದ್ದು ಅವರ ಹೆಸರಿನಲ್ಲಿ ಕಂಪನಿ ಖಾತೆಯಿಂದ 38 ಕೋಟಿ  ರು. ದೋಚಿದ್ದ ಇಬ್ಬರು ಆರೋಪಿಗಳನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮುರುಗೇಶ್‌ಪಾಳ್ಯ ನಿವಾಸಿ ಅಶ್ವನಿ ಜುಂಜುನ್‌ವಾಲ (36), ಬಾಗಲೂರಿನ ವೇದಾಂತ (28) ಬಂಧಿತರು.

ಅಶ್ವನಿ ಜುಂಜುವಾಲಾ ಗೋಲ್ಡ್‌ಮನ್‌ ಸ್ಯಾಚಸ್‌ ಕಂಪನಿಯ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದ. ಸೆ.4ರಂದು ಸಹದ್ಯೋಗಿ ಗೌರವ್‌ ಮಿಶ್ರಾ, ಅಭಿಷೇಕ್‌ ಯಾದವ್‌ ಮತ್ತು ಸುಜಿತ್‌ ಅಪ್ಪಯ್ಯ ಎಂಬುವವರ ಪಾಸ್‌ವರ್ಡ್‌ ಕದ್ದಿದ್ದ. ಕಂಪನಿ ಖಜಾನೆಯ .38 ಕೋಟಿಯನ್ನು ಎರಡು ಕಂತುಗಳಲ್ಲಿ ‘ಇಂಡಸ್ಟ್ರೀಯಲ್‌ ಬ್ಯಾಂಕ್‌ ಆಫ್‌ ಚೀನಾ’ಗೆ ಅಕ್ರಮವಾಗಿ ವರ್ಗಾಯಿಸಿದ್ದ.

ಆರೋಪಿಗಳು ಮಾರತ್ತಹಳ್ಳಿ ಗೋಲ್ಡ್‌ಮನ್‌ ಸ್ಯಾಚಸ್‌ ಕಂಪನಿಯಿಂದ .38 ಕೋಟಿ ವಿದೇಶಿ ಬ್ಯಾಂಕ್‌ಗೆ ವರ್ಗಾಯಿಸಿದ್ದರು. ಈತನ ಕೃತ್ಯಕ್ಕೆ ವೇದಾಂತ ಸಹಕರಿಸಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಆರೋಪಿ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಹಣ ವರ್ಗಾವಣೆ ಆಗಿದ್ದ ಕಂಪನಿ ಮುಖ್ಯಸ್ಥ ಅಭಿಷೇಕ್‌ ಪರ್ಷಿಕ್‌ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.