Asianet Suvarna News Asianet Suvarna News

ಆರೋಪಿಯೇ ಸಾಕ್ಷಿದಾರ, ಇನ್ನೊಬ್ಬರಿಗೆ ಪದೋನ್ನತಿ..!

ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ನಡೆದಿರುವ 3.51 ಕೋಟಿ ರು. ಹಣ ದುರುಪಯೋಗ ಪ್ರಕರಣದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡಿ ಮತ್ತು ಇಲಾಖಾ ವಿಚಾರಣೆ ಎದುರಿಸುತ್ತಿರುವ ಆಪಾದಿತ ಅಧಿಕಾರಿಯನ್ನೇ ಸಾಕ್ಷಿದಾರರನ್ನಾಗಿ ಪರಿಗಣಿಸಿರುವ ಹಾಗೂ ಮತ್ತೊಬ್ಬ ಅಧಿಕಾರಿಗೆ ಬಡ್ತಿ ನೀಡಿರುವುದು ಬೆಳಕಿಗೆ ಬಂದಿದೆ.

Twist For Mandya Money  misappropriation case snr
Author
First Published Jan 9, 2023, 6:29 AM IST

ಮಂಡ್ಯ ಮಂಜುನಾಥ

 ಮಂಡ್ಯ (ಜ. 09):  ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ನಡೆದಿರುವ 3.51 ಕೋಟಿ ರು. ಹಣ ದುರುಪಯೋಗ ಪ್ರಕರಣದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡಿ ಮತ್ತು ಇಲಾಖಾ ವಿಚಾರಣೆ ಎದುರಿಸುತ್ತಿರುವ ಆಪಾದಿತ ಅಧಿಕಾರಿಯನ್ನೇ ಸಾಕ್ಷಿದಾರರನ್ನಾಗಿ ಪರಿಗಣಿಸಿರುವ ಹಾಗೂ ಮತ್ತೊಬ್ಬ ಅಧಿಕಾರಿಗೆ ಬಡ್ತಿ ನೀಡಿರುವುದು ಬೆಳಕಿಗೆ ಬಂದಿದೆ.

ಪ್ರಕಾಶ್‌ ಗೋಪಾಲಕೃಷ್ಣ ಪವಾರ್‌ ಅವರನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಪವಾರ್‌ ಅವರು 28.06.2017ರಿಂದ 30.4.2019 ರವರೆಗೆ ಜಿಪಂ ಇಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯನಿರ್ವಹಿಸಿದ್ದು, ಇವರ ಅವಧಿಯಲ್ಲಿ 57,62,764 ರು. ಹಣ ದುರುಪಯೋಗವಾಗಿರುವುದು ಲೆಕ್ಕ ಪರಿಶೋಧನಾ ವರದಿಯಲ್ಲಿ ದಾಖಲಾಗಿದೆ.

ತನಿಖೆ-ವಿಚಾರಣೆಗೆ ಪತ್ರ ಹಿನ್ನೆಲೆ

ಸಾಮಾನ್ಯವಾಗಿ ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ಆಪಾದಿತರನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ಪ್ರಸಕ್ತ ಪ್ರಕರಣದಲ್ಲಿ ಪವಾರ್‌ ಅವರು ಮಂಡ್ಯದ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಚೇರಿಯ ಕಾರ್ಯವೈಖರಿ ಬಗ್ಗೆ ಆಕ್ಷೇಪಿಸಿ ತನಿಖೆ-ವಿಚಾರಣೆ ನಡೆಸುವ ಬಗ್ಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಅವರನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಲಾಗಿದೆ.

ಮತ್ತೊಬ್ಬ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ ಅವಧಿಯಲ್ಲಿ 1,19,99,109 ರು. ಹಣ ದುರುಪಯೋಗವಾಗಿದ್ದು, ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ನಡೆದಿರುವ 3.51 ಕೋಟಿ ರು. ಹಣ ದುರುಪಯೋಗದಲ್ಲಿ ಇವರ ಅವಧಿಯಲ್ಲೇ ಹೆಚ್ಚು ಹಣ ದುರುಪಯೋಗವಾಗಿದೆ.

ಮಾತೃ ಇಲಾಖೆಯಲ್ಲಿ ಬಡ್ತಿ

ಆಪಾದಿತ ಅಧಿಕಾರಿ ಚಂದ್ರಹಾಸ ಅವರ ಮಾತೃ ಇಲಾಖೆ ಲೋಕೋಪಯೋಗಿ ಇಲಾಖೆಯಾಗಿದ್ದರೂ ಇವರು ಹೆಚ್ಚಿನ ಸೇವೆ ಸಲ್ಲಿಸಿರುವುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯಲ್ಲೇ. ಇವರಿಗೆ 19.7.2022ರಲ್ಲಿ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್‌ ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿ ಆದೇಶಿಸಿ ಪದೋನ್ನತಿ ನೀಡಲಾಗಿದೆ.

ಪ್ರಕರಣ ಬೆಳಕಿಗೆ ಬಂದ ನಂತರ ಚಂದ್ರಹಾಸ ಅವರ ಅವಧಿಯಲ್ಲಿ ಹಣ ದುರುಪಯೋಗ ಸಂಬಂಧಿಸಿದಂತೆ ಆಪಾದಿತ ಅಧಿಕಾರಿಯ ಮಾತೃ ಇಲಾಖೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಇಂಜಿನಿಯರಿಂಗ್‌ ಇಲಾಖೆಯು ವರದಿ ಮಾಡಿದೆಯೇ ಇಲ್ಲವೇ ಎನ್ನುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಿಐಡಿಗೆ ತನಿಖೆ ಏಕೆ?

ಹಣ ದುರುಪಯೋಗ ಕುರಿತಂತೆ 2.11.2019ರಂದು ಮಂಡ್ಯದ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ಹೂಡಲಾಗಿದೆ. ಆದರೆ, 75 ಲಕ್ಷ ರು.ವರೆಗೆ ಇದ್ದಲ್ಲಿ ಮಾತ್ರ ಅಂತಹ ಪ್ರಕರಣಗಳ ವಿಚಾರಣೆ ಪೊಲೀಸ್‌ ಇಲಾಖೆ ವ್ಯಾಪ್ತಿಗೆ ಒಳಪಡುತ್ತಿತ್ತು. ಆದರೆ, ಈ ಪ್ರಕರಣ 3.51 ಕೋಟಿ ರು.ಗಳಾಗಿದ್ದರಿಂದ ಮೈಸೂರಿನ ಸಿಐಡಿ ಪೊಲೀಸ್‌ ನಿರೀಕ್ಷಕರಿಗೆ ಪ್ರಕರಣದ ಮುಂದಿನ ತನಿಖೆ ಕೈಗೊಳ್ಳುವಂತೆ ಹಸ್ತಾಂತರಿಸಲಾಗಿದೆ. ಹಾಲಿ ಪ್ರಕರಣದ ವಿಚಾರಣೆ ಸಿಐಡಿ ಹಂತದಲ್ಲಿದೆ.

ಹೆಚ್ಚಿನ ಸಮಯಾವಕಾಶ

ಸರ್ಕಾರದ ಸುತ್ತೋಲೆಯಂತೆ ವಿಚಾರಣಾಧಿಕಾರಿಗಳು ವಿಚಾರಣೆ ನಡೆಸಿ ವರದಿ ಸಲ್ಲಿಸಲು 4 ತಿಂಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ, ಇಲಾಖೆಯ ವಿಚಾರಣೆ ಪ್ರಕ್ರಿಯೆಯು ಅರೆ ನ್ಯಾಯಿಕ ನಡವಳಿಯಾಗಿದ್ದು, ಎಲ್ಲಾ ನಿಗದಿತ ವಿಧಿ-ವಿಧಾನಗಳನ್ನು ಅನುಸರಿಸಿ ನಡೆಸುವುದು ಅವಶ್ಯವಾಗಿರುತ್ತದೆ. ಒಂದು ವೇಳೆ ಇಲಾಖಾ ವಿಚಾರಣೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾದಲ್ಲಿ ಇಡೀ ನಡವಳಿಯೇ ಅಸಿಂಧುವಾಗುವ ಸಾಧ್ಯತೆ ಇರುತ್ತದೆ. ವಿಚಾರಣಾ ಪ್ರಕ್ರಿಯೆಯ ಕುರಿತು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ನಿರ್ದಿಷ್ಟಕಾಲಮಿತಿಯೊಳಗೆ ಇಲಾಖೆ ವಿಚಾರಣೆ ಪೂರ್ಣಗೊಳಿಸಲು ಕಷ್ಟಸಾಧ್ಯವಾಗುತ್ತದೆ. ಅಲ್ಲದೆ, ಈ ಪ್ರಕರಣದಲ್ಲಿ ಒಟ್ಟು 10 ಆಪಾದಿತರುಗಳಿದ್ದು, ಎಲ್ಲಾ ಆಪಾದಿತರ ವಿರುದ್ಧ ಆರೋಪಗಳ ಕುರಿತು ವರ್ಗೀಕರಣ, ನಿಯಂತ್ರಣ, ಮೇಲ್ವಿಚಾರಣೆ ನಿಯಮಗಳ ನಿಯಮ 11ರಡಿ ನಿರ್ದಿಷ್ಟಪಡಿಸಿರುವ ವಿಧಿ-ವಿಧಾನಗಳನ್ನು ಅನುಸರಿಸಿ ಇಲಾಖೆ ವಿಚಾರಣೆ ಪೂರ್ಣಗೊಳಿಸಲು ನಿಗದಿತ ಅವಧಿಗಿಂತ ಹೆಚ್ಚಿನ ಸಮಯಾವಕಾಶ ತೆಗೆದುಕೊಂಡಿರುವುದಾಗಿ ಹೇಳಲಾಗಿದೆ.

ಕೆಲ ಇಲಾಖೆಗಳಲ್ಲಿ 40 ವರ್ಷಗಳಿಂದ ಆಂತರಿಕ ಲೆಕ್ಕ ಪರಿಶೋಧನೆ ನಡೆದಿಲ್ಲ..!

ಮಂಡ್ಯ ಜಿಲ್ಲಾ ಪಂಚಾಯತ್‌ ಅಧೀನ ಕಚೇರಿಗಳ ಆಂತರಿಕ ಲೆಕ್ಕ ಪರಿಶೋಧನೆ (1978-79 ರಿಂದ 2021-22) ಕೆಲವು ಇಲಾಖೆಗಳಲ್ಲಿ 40 ವರ್ಷಗಳಿಂದ ಬಾಕಿ ಇರುವುದು ಕಂಡುಬಂದಿದೆ. ಕಾಲ ಕಾಲಕ್ಕೆ ಕಚೇರಿಗಳ ಲೆಕ್ಕಪರಿಶೋಧನೆ ನಡೆಸುವುದರಿಂದ ಹಣಕಾಸಿನ ನಿರ್ವಹಣೆ ಕುರಿತಂತೆ ಸ್ಪಷ್ಟಚಿತ್ರಣ ಸಿಗಲಿದೆ. ಇದರಿಂದ ಹಣ ದುರುಪಯೋಗ ಪ್ರಕರಣಗಳಿಗೆ ಕಡಿವಾಣ ಹಾಕಿದಂತಾಗುವುದು. 40 ವರ್ಷಕ್ಕಿಂತಲೂ ಹೆಚ್ಚು ಅವಧಿಯಿಂದ ಲೆಕ್ಕ ಪರಿಶೋಧನೆಯೇ ನಡೆಯದಿರುವುದನ್ನು ನೋಡಿದರೆ ಯಾವ ಯಾವ ಕಚೇರಿಗಳಲ್ಲಿ ಎಷ್ಟೆಷ್ಟುಹಣ ದುರುಪಯೋಗವಾಗಿರಬಹುದು ಎಂಬ ಬಗ್ಗೆ ಅನುಮಾನ-ಆತಂಕಗಳನ್ನು ಮೂಡಿಸಿದೆ.

ಲೆಕ್ಕಪರಿಶೋಧನೆ ಮಾಡದಿರುವುದರಿಂದ ಆರೋಪಿಗಳು ಪ್ರಕರಣದಿಂದ ತಪ್ಪಿಸಿಕೊಳ್ಳುವುದಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಹಣ ದುರುಪಯೋಗ ಪ್ರಕರಣಗಳು ನಂತರ ಬೆಳಕಿಗೆ ಬಂದರೂ ಆಪಾದಿತ ಅಧಿಕಾರಿ, ಸಿಬ್ಬಂದಿ ನಿವೃತ್ತರಾಗಿದ್ದರೆ ಅಥವಾ ಮರಣಹೊಂದಿದ್ದರೆ ಅವರಿಂದ ಹಣ ವಸೂಲಿ ಮಾಡಲಾಗುವುದಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟಉಂಟಾಗುತ್ತದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಪ್ರಮುಖವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶು ವೈದ್ಯಕೀಯ ಮತ್ತು ಸೇವಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕಾರ್ಯನಿರ್ವಾಹಕ ಕಚೇರಿಗಳು, ಪಂಚಾಯತ್‌ರಾಜ್‌, ರೇಷ್ಮೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅರಣ್ಯ, ತೋಟಗಾರಿಕೆ ಸೇರಿದಂತೆ ಜಿಪಂ ಅಧೀನ ಇಲಾಖೆ-ಕಚೇರಿಗಳಲ್ಲಿ 5, 10, 15, 20, 25 ವರ್ಷಗಳಿಂದಲೂ ಲೆಕ್ಕಪರಿಶೋಧನೆ ಬಾಕಿ ಉಳಿದಿರುವುದು ಕಂಡುಬಂದಿದೆ.

ಜಿಲ್ಲಾ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ 3.51 ಕೋಟಿ ರು.ನಷ್ಟುಹಣ ದುರುಪಯೋಗವಾಗಿರುವುದನ್ನು ಸದನದಲ್ಲಿ ಪ್ರಶ್ನಿಸಿದ್ದೆ. ಇದು ಸಾಮಾನ್ಯ ಸಂಗತಿಯಲ್ಲ. ಪ್ರತಿ ವರ್ಷ ಎಲ್ಲಾ ಇಲಾಖೆ-ಕಚೇರಿಗಳಲ್ಲಿ ಲೆಕ್ಕ ಪರಿಶೋಧನೆ ನಡೆಸಬೇಕು. ಅಗತ್ಯವಿರುವಷ್ಟುಅಧಿಕಾರಿ-ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಿ ಹಣ ದುರುಪಯೋಗ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಸಾರ್ವಜನಿಕ ಹಣ ಲೂಟಿಗೆ ಕೊನೆಯೇ ಇಲ್ಲದಂತಾಗುತ್ತದೆ.

- ಮಧು ಜಿ.ಮಾದೇಗೌಡ, ವಿಧಾನಪರಿಷತ್‌ ಸದಸ್ಯರು

Follow Us:
Download App:
  • android
  • ios