ತುಮಕೂರು[ಫೆ.11]: ಇತಿಹಾಸ ಪ್ರಸಿದ್ಧ ಸಿದ್ದಗಂಗಾ ಮಠದಲ್ಲಿ ಫೆ.12ರಿಂದ ನಡೆಯಲಿರುವ ಶ್ರೀಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಯವರು ನಗರಾದ್ಯಂತ ಸೋಮವಾರ ಭಿಕ್ಷಾಟನೆ ನಡೆಸಿದ್ದಾರೆ. ಶ್ರೀಮಠದ ಸಂಪ್ರದಾಯದಂತೆ ಶ್ರೀಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಮಠಾಧ್ಯಕ್ಷರು ಭಿಕ್ಷಾಟನೆ ನಡೆಸುವ ಪದ್ಧತಿ ನಡೆದು ಬಂದಿದೆ. ಲಿಂಗೈಕ್ಯ ಹಿರಿಯ ಶ್ರೀಗಳ ದಾರಿಯಲ್ಲೇ ಮಠಾಧ್ಯಕ್ಷ ಶ್ರೀಸಿದ್ಧಲಿಂಗ ಸ್ವಾಮೀಜಿಯವರು ಸಹ ಶ್ರೀಮಠವನ್ನು ಮುನ್ನಡೆಸುವ ಜತೆಗೆ ಜಾತ್ರಾ ಮಹೋತ್ಸವಕ್ಕೆ ದವಸ ಧಾನ್ಯ ಸಂಗ್ರಹಿಸಲು ನಗರಾದ್ಯಂತ ಭಿಕ್ಷಾಟನೆ ನಡೆಸಿದರು.

ಶ್ರೀಗಳಿಗೆ ಪಾದಪೂಜೆ:

ಮೊದಲು ಸಿದ್ದಗಂಗಾ ಮಠದಿಂದ ಬಟವಾಡಿಯ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯ ಕಚೇರಿಗೆ ಭಿಕ್ಷಾಟನೆಗೆ ಆಗಮಿಸಿದ ಶ್ರೀಗಳಿಗೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಬಳಿಕ ಎಪಿಎಂಸಿ ವತಿಯಿಂದ ಶ್ರೀಮಠದ ಜಾತ್ರಾ ಮಹೋತ್ಸವಕ್ಕೆ ಕಾಣಿಕೆ ನೀಡಿದರು. ಎಪಿಎಂಸಿ ಗ್ರೈನ್‌ ಮರ್ಚೆಂಟ್‌ ಅಸೋಸಿಯೇಷನ್‌ಯಿಂದ 10 ಸಾವಿರ ರು. ಚೆಕ್‌ ನೀಡಲಾಯಿತು. ಆ ಮೇಲೆ ಶ್ರೀಗಳು ಎಪಿಎಂಸಿ ಯಾರ್ಡ್‌ನ ಆವರಣ ಸೇರಿದಂದೆ ನಗರದ ವಿವಿಧೆಡೆ ಸಂಚರಿಸಿ ಭಿಕ್ಷಾಟನೆ ಮಾಡಿದರು.

ಹಿಂದಿನ ಸಂಪ್ರದಾಯ ಮುಂದುವರಿಕೆ:

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಸಿದ್ಧಲಿಂಗ ಸ್ವಾಮೀಜಿ, ಪ್ರತಿ ವರ್ಷವೂ ಶ್ರೀಮಠದ ಜಾತ್ರಾ ಮಹೋತ್ಸವಕ್ಕೆ ನಗರದ ಜನತೆಯಿಂದ ವಿಶೇಷ ರೀತಿಯಲ್ಲಿ ಸಹಕಾರ ದೊರೆಯುತ್ತಿದೆ. ಎಪಿಎಂಸಿ ಯಾರ್ಡ್‌, ಮಂಡಿ ಮರ್ಚೆಂಟ್ಸ್‌ ಸಂಘ ಸೇರಿದಂತೆ ನಗರದ ಅನೇಕ ಬೀದಿಗಳಲ್ಲಿ ಸಂಚರಿಸುತ್ತಾ ಭಿಕ್ಷಾಟನೆ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಈ ಸಂಪ್ರದಾಯವನ್ನು ತಾವೂ ಮುಂದುವರಿಸಿಕೊಂಡು ಹೋಗುತ್ತಿದ್ದು, ಜಾತ್ರಾ ಮಹೋತ್ಸವಕ್ಕೆ ನಗರದ ಜನರಿಂದ ದವಸ ಧಾನ್ಯ ಸಂಗ್ರಹಿಸುತ್ತಿರುವುದಾಗಿ ಹೇಳಿದರು.