ತುಮಕೂರು[ಜೂ.14]: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಸಂಸದ ಜಿ.ಎಸ್‌.ಬಸವರಾಜು, ತುಮಕೂರಿಗೆ ಹೇಮಾವತಿ ನೀರು ಹಂಚಿಕೆ ವಿಚಾರದಲ್ಲಿ ದೇವೇಗೌಡರ ಕುಟುಂಬ ಅನ್ಯಾಯ ಮಾಡುತ್ತಾ ಬಂದಿದೆ ಎಂದು ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರೋ ರಾಜಕಾರಣಿ ಹೇಳುತ್ತಾನೆಂದು ಹೇಮಾವತಿ ನಾಲೆಗೆ ಲಿಂಕಿಂಗ್‌ ಕೆನಾಲ… ನಿರ್ಮಿಸಿ ಮಾಗಡಿಗೆ ನೀರು ಕೊಂಡೊಯ್ಯುವ ದುಸ್ಸಾಹಸಕ್ಕೆ ಕೈ ಹಾಕಬೇಡಿ. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ ಸಂಸದರು, ಇದು ನಾನು ನಿಮಗೆ ಕೊಡುವ ಅಲಾರಾಂ ಎಂದು ಭಾವಿಸಿ ಎಂದರು.

ತುಮಕೂರಿಗೆ ಎಂದೂ ಸಂಪೂರ್ಣವಾಗಿ ಹೇಮಾವತಿ ನೀರನ್ನು ಬಿಟ್ಟಿಲ್ಲ. ತುಮಕೂರಿನವರೇನು ಪಾಕಿಸ್ತಾನದವರಾ ಅಥವಾ ಪಾಪಿಷ್ಟರಾ ಎಂದು ಪ್ರಶ್ನಿಸಿದ ಬಸವರಾಜು, ದೇವೇಗೌಡರು ವಯೋವೃದ್ಧರು. ಅವರಿಗೆ ಸದ್ಬುದ್ಧಿ ಬರಲಿ, ಮಕ್ಕಳಿಗೂ ಒಳ್ಳೆ ಬುದ್ಧಿ ಕಲಿಸಲಿ. ಅದರಲ್ಲೂ ಸಚಿವ ರೇವಣ್ಣಗೆ ಒಳ್ಳೆ ಬುದ್ಧಿ ಕಲಿಸಲಿ ಎಂದು ಹೇಳಿದರು.

ಗೊರೂರು ಡ್ಯಾಂ ಬೀಗದ ಕೀ ಕೊಡಲಿ. ನಾನು ನೀರಗಂಟಿ ಕೆಲಸ ಮಾಡಿಸುತ್ತೇನೆ. ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಶಾಸ್ತ್ರ ಕೇಳಿ ಕೆಲಸ ಮಾಡೋ ಜನ ಅವರು ಎಂದು ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.