Asianet Suvarna News Asianet Suvarna News

ತುಮಕೂರು: ಕಾಂಗ್ರೆಸ್ ಸಭೆಗೆ ಲೋಕೇಶ್ವರ ಅಭಿಮಾನಿಗಳ ಬಹಿಷ್ಕಾರ

ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಮಾ.22 ರ ಶುಕ್ರವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ಲೋಕಸಭಾ ಚುನಾವಣೆಗೆ ಸಂಬಂದಿಸಿದಂತೆ ಕರೆದಿರುವ ಸಭೆಗೆ ಮುಖಂಡ ಲೋಕೇಶ್ವರ ಬಣದ ನೊಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬಹಿಷ್ಕರಿಸಿದ್ದಾರೆ. ಕಾಂಗ್ರಸ್ ಮುಖಂಡರಾದ ಲೋಕೇಶ್ವರ ಸಹ ಆ ಸಭೆಗೆ ಹೋಗಬಾರದೆಂದು ಆಗ್ರಹಿಸಿದ್ದಾರೆ.

Tumkur  Lokeshwar fans boycott Congress meeting snr
Author
First Published Mar 21, 2024, 9:04 AM IST

  ತಿಪಟೂರು : ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಮಾ.22 ರ ಶುಕ್ರವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ಲೋಕಸಭಾ ಚುನಾವಣೆಗೆ ಸಂಬಂದಿಸಿದಂತೆ ಕರೆದಿರುವ ಸಭೆಗೆ ಮುಖಂಡ ಲೋಕೇಶ್ವರ ಬಣದ ನೊಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬಹಿಷ್ಕರಿಸಿದ್ದಾರೆ. ಕಾಂಗ್ರಸ್ ಮುಖಂಡರಾದ ಲೋಕೇಶ್ವರ ಸಹ ಆ ಸಭೆಗೆ ಹೋಗಬಾರದೆಂದು ಆಗ್ರಹಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಇಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ನಡೆದಿದ್ದ ಸಭೆಯಲ್ಲಿ ಲೋಕೇಶ್ವರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿ, ಪಕ್ಷದ ಅಭ್ಯರ್ಥಿಯಾಗಿದ್ದ ಕೆ.ಷಡಕ್ಷರಿ ಪರ ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸಿ ಗೆಲುವಿಗೆ ಹಗಲಿರುಳು ದುಡಿದಿದ್ದರು.

ಆ ಸಮಯದಲ್ಲಿ ಲೋಕೇಶ್ವರ ಹಾಗೂ ಷಡಕ್ಷರಿಯವರನ್ನು ಜೋಡೆತ್ತುಗಳೆಂದು ಕಾಂಗ್ರೆಸ್ ವಲಯದಲ್ಲಿ ಬಿಂಬಿಸಲಾಗಿತ್ತು. ವಿಧಾನಸಭೆ ಚುನಾವಣೆ ಮುಗಿದ ಕೆಲ ತಿಂಗಳುಗಳಲ್ಲೇ ಶಾಸಕ ಕೆ. ಷಡಕ್ಷರಿಯವರು ನಮಗೆ ಯಾವುದೇ ಸ್ಥಾನಮಾನ ನೀಡುತ್ತಿಲ್ಲ. ಪಕ್ಷ ಹಾಗೂ ಅಭಿವೃದ್ದಿ ವಿಚಾರದಲ್ಲೂ ಸಹ ನನ್ನನ್ನು ಹಾಗೂ ನಮ್ಮ ಕಡೆಯ ಕಾರ್ಯಕರ್ತರನ್ನು ಕಡೆಗಣೆಸಿದ್ದಾರೆ ಎಂದು ನೊಂದು ಪಕ್ಷದಿಂದ ಹಾಗೂ ಷಡಕ್ಷರಿಯವರಿಂದ ಅಂತರ ಕಾಯ್ದುಕೊಂಡಿದ್ದರು.

ಈ ಬಗ್ಗೆ ಜಿಲ್ಲಾ, ರಾಜ್ಯ ಕಾಂಗ್ರೆಸ್ ವರಿಷ್ಠರು ಹಾಗೂ ಜಿಲ್ಲಾ ಮಂತ್ರಿಗಳಾದ ಡಾ.ಪರಮೇಶ್ವರ ಅವರಿಗೂ ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸಿದ ನನಗೆ ಹಾಗೂ ಕಾರ್ಯಕರ್ತರಿಗೆ ನೋವು, ಅನ್ಯಾಯವಾಗುತ್ತಿದ್ದು ಕೂಡಲೆ ಸರಿಪಡಿಸಿ ಎಂದು ಹಲವು ಬಾರಿ ಮನವಿಮಾಡಿಕೊಂಡಿದ್ದರು.

ವರಿಷ್ಠರು ಬಂದು ನನಗೆ ಹಾಗೂ ನಮ್ಮ ಕಾರ್ಯಕರ್ತರಿಗಾಗಿರುವ ಅನ್ಯಾಯವನ್ನು ಈ ವರೆಗೂ ಸರಿಪಡಿಸಿಲ್ಲ ಎಂದು ಲೋಕೇಶ್ವರ ಕಳೆದ ವಾರ ತಮ್ಮ ಕಡೆಯ ಕಾರ್ಯಕರ್ತರ, ಅಭಿಮಾನಿಗಳ ಸಭೆ ನಡೆಸಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆಲುವಿಗೆ ಸ್ಪಂದಿಸಕೂಡದು ಮತ್ತು ಕೆಲಸ ಮಾಡಕೂಡದೆಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಹಾಗಾಗಿ ಲೋಕಸಭಾ ಚುನಾವಣಾ ಹಿನ್ನಲೆ ಮಾ. 22 ನಡೆಯುತ್ತಿರುವ ಪಕ್ಷದ ಕಾರ್ಯಕರ್ತರ ಸಭೆಗೆ ಯಾವುದೇ ಕಾರಣಕ್ಕೂ ಹೋಗಕೂಡದೆಂದು ಲೋಕೇಶ್ವರ ಅಭಿಮಾನಿಗಳು, ಹಿತೈಷಿಗಳು ಮತ್ತು ನೊಂದ ಕಾರ್ಯಕರ್ತರುಗಳು ತಮ್ಮ ಮುಖಂಡ ಲೋಕೇಶ್ವರ ಅವರನ್ನು ಆಗ್ರಹಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲೋಕೇಶ್ವರ ಅವರಿಗೆ ಅನ್ಯಾಯವಾಗಿರುವ ಬಗ್ಗೆ ಬಹುದೊಡ್ಡ ಚರ್ಚೆಯೇ ನಡೆಯುತ್ತಿದೆ. ಪಕ್ಷದ ವರಿಷ್ಠರು ಈ ಬಗ್ಗೆ ಯಾವ ಕ್ರಮ, ನಿಲುವು ತೆಗೆದುಕೊಳ್ಳುವರೋ ಎಂಬುದು ತಾಲೂಕಿನ ಕಾಂಗ್ರೆಸ್ ವಲಯದಲ್ಲಿ ಆಗುತ್ತಿರುವ ಬಹು ದೊಡ್ಡ ಚರ್ಚೆಯಾಗಿದೆ.

ಕಳೆದ ವಿಧಾನಸಬಾ ಚುನಾವಣೆಯಲ್ಲಿ ನನ್ನನ್ನು ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕರಿಸಿ, ಮುಂದೆ ಪಕ್ಷ ಹಾಗೂ ಇತರೆ ವಿಚಾಗಳಲ್ಲೂ ನಿಮಗೆ ಆದ್ಯತೆ ನೀಡುತ್ತೇವೆಂದು ಭರವಸೆ ನೀಡಿದ್ದರು. ಆದರೆ ನಾನು ಹಾಗೂ ನನ್ನ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಪಕ್ಷದ ಅಭ್ಯರ್ಥಿಯನ್ನು ಶಾಸಕರಾಗಿ ಆಯ್ಕೆಯಾಗುವಂತೆ ದುಡಿದಿದ್ದು, ಈಗ ನಮ್ಮನ್ನು ಕಡೆಗಣಿಸಲಾಗಿದೆ. ಪಕ್ಷದ ವರಿಷ್ಠರಿಗೆ ವಿಷಯ ತಿಳಿದಿದ್ದರೂ ಪ್ರಯೋಜನವಾಗದ್ದರಿಂದ ನಾನು ಸದ್ಯಕ್ಕೆ ಈ ಚುನಾವಣೆಯಲ್ಲಿ ತಟಸ್ಥನಾಗಿದ್ದೇನೆ.

- ಲೋಕೇಶ್ವರ, ಕಾಂಗ್ರೆಸ್ ಮುಖಂಡರು, ತಿಪಟೂರು.

Follow Us:
Download App:
  • android
  • ios