Tumakur : ವಾಮ ಮಾರ್ಗದಲ್ಲಿ ಬಿಜೆಪಿ ಗೆಲ್ಲಲು ಹೊರಟಿದೆ
ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸರ್ಕಾರೇತರ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪರವಾಗಿರುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದು, ಚುನಾವಣೆಯನ್ನು ವಾಮ ಮಾರ್ಗದಲ್ಲಿ ಗೆಲ್ಲಲ್ಲು ಹೊರಟಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಆರೋಪಿಸಿದ್ದಾರೆ.
ತುಮಕೂರು (ನ.20): ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸರ್ಕಾರೇತರ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪರವಾಗಿರುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದು, ಚುನಾವಣೆಯನ್ನು ವಾಮ ಮಾರ್ಗದಲ್ಲಿ ಗೆಲ್ಲಲ್ಲು ಹೊರಟಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 105ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್ಜಿಓ ಸಂಸ್ಥೆ ಮೂಲಕ ಮೂಲಕ ಕಾಂಗ್ರೆಸ್ ಪರವಾಗಿ ಮತ ಚಲಾಯಿಸುವ ಮತದಾರರನ್ನು ಗುರುತಿಸಿ, ಅವರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡುವ ಹುನ್ನಾರ ನಡೆಸಿದೆ. ಈ ಹಿಂದಿನ ಚುನಾವಣೆಗಳಲ್ಲಿಯೂ ಇದೇ ರೀತಿಯ ಪ್ರಯತ್ನ ನಡೆದಿದ್ದು, ಈ ಬಾರಿ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ವ್ಯಾಪಕವಾಗಿ ಕಾಂಗ್ರೆಸ್ ಮತದಾರರನ್ನು ಕೈಬೀಡುವ ಹುನ್ನಾರ ನಡೆಸಿದೆ. ತುಮಕೂರು ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣ ಕಂಡು ಬಂದರೆ ಉಗ್ರ ಹೋರಾಟ ನಡೆಸಲಾಗುವುದು. ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಆಗ್ರಹಿಸಿದರು.
ಮಾಜಿ ಶಾಸಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರಫೀಕ್ ಅಹಮದ್ ಮಾತನಾಡಿ, ಇಂದಿರಾಗಾಂಧಿ ಅವರ 16 ವರ್ಷಗಳ ಆಡಳಿತ ಇಡೀ ದೇಶದ ರಾಜಕೀಯದಲ್ಲಿಯೇ ಅತ್ಯಂತ ಮಹತ್ವದ ದಿನಗಳಾಗಿವೆ. ಬಾಂಗ್ಲಾ ವಿಭಜನೆ, ತುರ್ತು ಪರಿಸ್ಥಿತಿ ಸೇರಿದಂತೆ ಹಲವಾರು ಗಟ್ಟಿನಿರ್ಧಾರಗಳು ಇಡೀ ಪ್ರಪಂಚದಲ್ಲಿಯೇ ಭಾರತದ ಗಟ್ಟಿತನ ಪ್ರದರ್ಶನಗೊಂಡ ಕಾಲ. ಉಳುವವನೇ ಭೂ ಒಡೆಯ, ಗರೀಬಿ ಹಠಾವೋ ಅತ್ಯಂತ ಜನಪರ ಕಾರ್ಯಕ್ರಮಗಳು, ಇವುಗಳ ಬಗ್ಗೆ ಜನರು ಅರಿತಿದ್ದಾರೆ. ಇಂದಿಗೂ ಅವುಗಳ ನೆನಪಿನಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮತದಾರರಿರುವುದು ಇಂದಿರಾಗಾಂಧಿ ಅವರ ದೂರದೃಷ್ಟಿಆಡಳಿತಕ್ಕೆ ಹಿಡಿದ ಕನ್ನಡಿ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಕೆಂಚಮಾರಯ್ಯ, ಮಹಿಳಾ ಮುಖಂಡರಾದ ಅರುಂಧತಿ ಮಾತನಾಡಿದರು. ಸಮಾರಂಭದಲ್ಲಿ ಮಾಜಿ ಶಾಸಕ ಎಸ್.ಷಫಿ ಅಹಮದ್, ಮುಖಂಡರಾದ ಮಂಜುನಾಥ್, ಡಾ. ಫರ್ಹಾನಾ, ಹಿದಾಯುತ್ ಹುಸೇನ್, ನಯಾಜ್ ಅಹಮದ್, ಮಹೇಶ್, ನರಸಿಂಹಯ್ಯ, ಸಂಜೀವಕುಮಾರ್, ಮೆಹಬೂಬ್ ಪಾಷ, ನಟರಾಜಶೆಟ್ಟಿ, ಗೀತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಾಕ್ಸ್
ಬಡವರ ಅಭಿವೃದ್ಧಿಗಾಗಿ 20 ಅಂಶಗಳ ಕಾರ್ಯಕ್ರಮ
ಆಹಾರ ಸೇರಿದಂತೆ ಪ್ರತಿಯೊಂದಕ್ಕೂ ಇನ್ನೊಂದು ದೇಶದ ಮೇಲೆ ಅವಲಂಬಿತವಾಗಿದ್ದ ಭಾರತ ದೇಶದ ಕಷ್ಟ ಕಾಲದಲ್ಲಿ ಪ್ರಧಾನಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡ ಇಂದಿರಾ ಗಾಂಧಿ, ಅಂದಿನ ಕೃಷಿ ಸಚಿವರಾಗಿದ್ದ ಬಾಬು ಜಗಜೀವನ್ ರಾಂ ಅವರನ್ನು ವಿದೇಶಕ್ಕೆ ಕಳುಹಿಸಿ, ಅಲ್ಲಿನ ಕೃಷಿ ಪದ್ಧತಿಗಳನ್ನು ಅಧ್ಯಯನ ಮಾಡಿಸಿ, ಹೊಸ ತಳಿಗಳ ಜೊತೆಗೆ, ರಾಸಾಯನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದರ ಫಲವಾಗಿ ಇಂದು ಭಾರತ ತನ್ನ ಜನಸಂಖ್ಯೆಗೆ ಅಗತ್ಯವಿರುವಷ್ಟುಆಹಾರವನ್ನು ಉತ್ಪಾದಿಸುವ ಶಕ್ತಿ ಬೆಳೆಸಿಕೊಂಡಿದೆ. ಅವರ ಬಡವರ ಅಭಿವೃದ್ಧಿಗಾಗಿ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮಗಳು ದೇಶದ ಜಿಡಿಪಿಯ ಜೊತೆಗೆ, ಭಾರತೀಯರನ್ನು ಬಡತನ ರೇಖೆಗಿಂತ ಮೇಲೆತ್ತಲು ಸಹಕಾರಿಯಾಗಿವೆ ಎಂದು ಆರ್.ರಾಮಕೃಷ್ಣ ನುಡಿದರು.
ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸರ್ಕಾರೇತರ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪರವಾಗಿರುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದು, ಚುನಾವಣೆಯನ್ನು ವಾಮ ಮಾರ್ಗದಲ್ಲಿ ಗೆಲ್ಲಲ್ಲು ಹೊರಟಿದೆ
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 105ನೇ ಜನ್ಮ ದಿನೋತ್ಸವ ಕಾರ್ಯಕ್ರಮ