ಕೆನಾಲ್ ಯೋಜನೆ ವಿರೋಧಿಸಿ 25ಕ್ಕೆ ತುಮಕೂರು ಬಂದ್ : ಏನಿದೆ-ಏನಿಲ್ಲ?
ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ಜೂ. 25 ರಂದು ಸ್ವಯಂ ಘೋಷಿತವಾಗಿ ತುಮಕೂರು ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.
ತುಮಕೂರು : ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ಜೂ. 25 ರಂದು ಸ್ವಯಂ ಘೋಷಿತವಾಗಿ ತುಮಕೂರು ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೇಮಾವತಿ ನೀರನ್ನು ಅನ್ಯರಿಗೆ ಬಿಟ್ಟು ನಾವು ಉಪವಾಸ ಮಾಡಬೇಕಾಗಿದೆ. ಜಮೀನುಗಳನ್ನು ಮಾರಾಟ ಮಾಡಿಕೊಂಡು ವಲಸೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೆನಾಲ್ ವಿರೋಧಿಸಿ ಬಂದ್‌ಗೆ ಕರೆ ಕೊಟ್ಟಿದ್ದಾಗಿ ತಿಳಿಸಿದರು.
ಈಗಾಗಲೇ ನಾವು ಅನೇಕ ಚಳುವಳಿಗಳನ್ನು ಈ ಹಿನ್ನೆಲೆಯಲ್ಲಿ ರೂಪಿಸಿದ್ದೇವೆ. ನಾಲಾ ಕಾಮಗಾರಿಯನ್ನು ಜೆಸಿಬಿಗಳ ಮೂಲಕ ಮುಚ್ಚಿಸಿ ಪ್ರತಿಭಟನೆ ನಡೆಸಿದ್ದೇವೆ. ಈಗಾಗಲೇ ಬಂದಂತಹ ಪೈಪ್‌ಗಳನ್ನು ವಾಪಸ್ ಕಳುಹಿಸಿ ನಮ್ಮ ಹೋರಾಟದ ಕಿಚ್ಚನ್ನು ತೋರಿಸಿದ್ದೇವೆ. ಗೃಹ ಸಚಿವ ಮನೆ ಮುಂದೆ ಪ್ರತಿಭಟನೆ ಮಾಡುವ ಮೂಲಕ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಜಿಲ್ಲಾಧ್ಯಂತ ಬಂಧನಕ್ಕೂ ಒಳಗಾಗಿದ್ದೇವೆ ಎಂದರು.
ಇಷ್ಟಾದರೂ ಕಾವೇರಿ ನೀರಾವರಿ ನಿಗಮದವರು ಶ್ರೀರಂಗ ಕುಡಿಯುವ ನೀರಿನ ಏತ ನೀರಾವರಿ ಯೋಜನೆಗೆ ಬೇರೆ ಬೇರೆ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಿರುವುದು ನಮ್ಮನ್ನು ಮತ್ತಷ್ಟು ಕೆರಳಿಸಿದೆ. ಆದ್ದರಿಂದ ತುಮಕೂರು ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ನಾಗರಿಕರು, ರೈತ ಪರ ಸಂಘಟನೆಗಳು, ಮಹಿಳಾ ಸಂಘಟನೆ, ಆಟೋ ಚಾಲಕರು, ಕನ್ನಡಪರ ಸಂಘಟನೆ, ಹಮಾಲಿ ಸಂಘ, ಗುತ್ತಿಗೆದಾರರ ಸಂಘ, ಅಂಗಡಿ ಮಾಲೀಕರ ಸಂಘ, ಲಾರಿ ಚಾಲಕರ ಸಂಘ, ಅಕ್ಕಿ ಗಿರಣಿಯ ಮಾಲೀಕರ ಸಂಘ, ಶಾಲಾ, ಕಾಲೇಜುಗಳ ಮುಖ್ಯಸ್ಥರು ಒಟ್ಟಾರೆಯಾಗಿ ಪಕ್ಷಾತೀತ, ಜಾತ್ಯತೀತವಾಗಿ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.
ಮೇಲ್ಕಂಡ ಎಲ್ಲ ಸಂಘ ಸಂಸ್ಥೆಗಳವರೂ ಕೂಡ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಅಂದು ಅಕ್ಷರಶಃ ಜಿಲ್ಲೆ ಸಂಪೂರ್ಣ ಸ್ಥಬ್ಧವಾಗಲಿದೆ. ಆದ್ದರಿಂದ ಜನರ ಜೀವನಕ್ಕೆ ಅಗತ್ಯ ಮೂಲಭೂತ ವಸ್ತುಗಳಾದ ಹಾಲು, ಮೊಸರು, ಔಷಧಿಗಳು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಮುಂಗಡವಾಗಿಯೇ ಜೋಡಿಸಿಟ್ಟುಕೊಳ್ಳಲು ಜನತೆಯಲ್ಲಿ ಮನವಿ ಮಾಡಿದ್ದಾರೆ.
ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್‌ಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ. ಉಳಿದ ಯಾವುದಕ್ಕೂ ಅವಕಾಶ ಇರುವುದಿಲ್ಲ. ಇಷ್ಟಾದರೂ ಸರ್ಕಾರ ಏನಾದರೂ ಬಲವಂತವಾಗಿ ನಮ್ಮನ್ನು ಹತ್ತಿಕ್ಕುವತ ಕೆಲಸ ಮಾಡಿ ಸಾರಿಗೆ ನಿಗಮದ ಬಸ್‌ಗಳನ್ನು ಓಡಿಸಿದ್ದೇ ಆದರೆ, ಮುಂದೆ ಆಗುವಂತ ಅನಾಹುತಕ್ಕೆ ನಾವು ಜವಾಬ್ದಾರರಾಗುವುದಿಲ್ಲ ಎಂದರು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಜೆಡಿಯು,ಆಮ್‌ಆದ್ಮಿ ಪಾರ್ಟಿ, ಸಿಪಿಐ, ಸಿಪಿಎಮ್ ಮುಂತಾದ ರಾಜಕೀಯ ಪಕ್ಷಗಳು ಕೂಡ ಪಕ್ಷಾತೀತವಾಗಿ ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಹೇಮಾವತಿ ನೀರಾವರಿ ಹೋರಾಟ ಸಮಿತಿ ಮನವಿ ಮಾಡಿದೆ. ಇಷ್ಟಾದರೂ ಕೂಡ ಸರ್ಕಾರ ಎಚ್ಚೆತ್ತುಕೊಂಡು ಯೋಜನೆಯನ್ನು ಕೈ ಬಿಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಈ ಯೋಜನೆಯ ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿದ್ದು ಕಾಮಗಾರಿ ಚಾಲನೆ ಪಡೆದುಕೊಂಡಲ್ಲಿ ನೂರು ಕಿಲೋ ಮೀಟರ್ ಸುತ್ತಳತೆಯ ಹೇಮಾವತಿ ನಾಲೆಗೆ ಒಂದು ಬೊಗಸೆಯಷ್ಟು ನೀರು ಕೂಡ ಹತ್ತುವುದಿಲ್ಲ. ಏಕೆಂದರೆ ಪೈಪ್ ಲೈನ್ ಕಾಮಗಾರಿಯು ತಗ್ಗು ಪ್ರದೇಶದಲ್ಲಿದ್ದು ನಾಲೆಯು ಎತ್ತರದ ಪ್ರದೇಶದಲ್ಲಿದೆ. ಆದ್ದರಿಂದ ಪೈಪ್ ಲೈನ್ ಕಾಮಗಾರಿಗೆ ಹೆಚ್ಚು ಫೋರ್ಸ್ ಸಿಗುತ್ತದೆ .ಗುಬ್ಬಿ, ಸಿ ಎಸ್ ಪುರ, ಸಂಪಿಗೆ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಕೊರಟಗೆರೆ, ಮಧುಗಿರಿ, ತುಮಕೂರು ನಗರ, ತುಮಕೂರು ಗ್ರಾಮಾಂತರ ಸೇರಿದಂತೆ ಎಲ್ಲಾ ತಾಲೂಕುಗಳಿಗೆ ಒಂದು ಬೊಗಸೆ ನೀರು ಕೂಡ ಬರುವುದಿಲ್ಲ ಎಂದರು.
ಮಾಜಿ ಶಾಸಕ ಎಚ್.ನಿಂಗಪ್ಪ, ಎಸ್.ಡಿ.ದಿಲೀಪ್‌ಕುಮಾರ್, ಪಂಚಾಕ್ಷರಯ್ಯ, ಬೆಳಗುಂಬ ಪ್ರಭಾಕರ್, ಧನಿಯಾಕುಮಾರ್, ಕೆ.ಪಿ.ಮಹೇಶ್, ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ರಾಜಣ್ಣ, ಎಸ್. ರಾಮಚಂದ್ರರಾವ್, ರಾ.ವೀರೇಶ್‌ಪ್ರಸಾದ್, ಜಿ. ದೇವರಾಜು, ಭದ್ರೇಗೌಡ, ಕೆ.ವಿ.ಬೆಟ್ಟಯ್ಯ, ಬಸವರಾಜು, ಜುಬೇರ ಷಫಿ, ಎನ್. ಅರುಣ್‌ಕುಮಾರ್, ಷಬ್ಬೀರ್‌ಅಹಮದ್, ಸೋಮಶೇಖರ್, ಚಂದ್ರಕೀರ್ತಿ, ವಾಸುದೇವಶೆಟ್ಟಿ, ಟ.ಜಿ.ವೇದಮೂರ್ತಿ, ಗುರುಪ್ರಕಾಶ್ ಬಳ್ಳುಕರಾಯ, ತರಕಾರಿ ಮಹೇಶ್, ಕಾಫೀಪುಡಿರಾಜಣ್ಣ, ಗೋಕುಲ್ ಮಂಜುನಾಥ್, ಶಶಿಧರ್, ಬಡ್ಡಿಹಳ್ಳಿ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.