ತುಮಕೂರು (ಸೆ.02):  ಪಕ್ಷದ ಹಿತದೃಷ್ಟಿಯಿಂದ ಪ್ರಧಾನಿ ಹುದ್ದೆಯನ್ನು ತ್ಯಜಿಸಿ, ತಾವೊಬ್ಬ ಪ್ರಬುದ್ಧ ರಾಜಕಾರಣಿ ಎಂಬುದನ್ನು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಸಾಬೀತು ಪಡಿಸಿದ್ದರು ಎಂದು ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್‌. ಷಫಿ ಅಹಮದ್‌ ತಿಳಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಆರ್‌.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮಾಜಿ ರಾಷ್ಟ್ರಪತಿ ಭಾರತರತ್ನ ಪ್ರಣಬ್‌ ಮುಖರ್ಜಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ತಮ್ಮ 50 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಯಾವ ಕಪ್ಪು ಚುಕ್ಕೆಯೂ ಇರದಂತೆ, ಹಲವಾರು ಹುದ್ದೆಗಳನ್ನು ಅಲಂಕರಿಸಿದವರು. ಇಂತಹವರ ಸಾವು ರಾಜಕೀಯ ವಲಯಕ್ಕೆ ತುಂಬಲಾರದ ನಷ್ಟಎಂದರು.

ಇತಿಹಾಸ ಮತ್ತು ರಾಜ್ಯಶಾಸ್ತ್ರ ಪದವೀಧರರಾಗಿ 1976ರಲ್ಲಿ ರಾಜ್ಯಸಭಾ ಸದಸ್ಯರಾಗುವ ಮೂಲಕ ರಾಜಕಾರಣಕ್ಕೆ ಪ್ರವೇಶ ಪಡೆದ ಪ್ರಣಬ್‌ ಮುಖರ್ಜಿ, ಹಣಕಾಸು, ರಕ್ಷಣೆ ಹಾಗೂ ವಿದೇಶಾಂಗದಂತಹ ಮಹತ್ವದ ಹುದ್ದೆಗಳನ್ನು ಅಲಂಕರಿಸಿ, ಆ ಹುದ್ದೆಗಳಿಗೆ ಘನತೆ ತಂದುಕೊಟ್ಟವರು ಎಂದರು.

ಕಾಂಗೈ‌ನ ಪ್ರತಿಭಾವಂತ ಆಪತ್ಭಾಂಧವ ಪ್ರಣಬ್‌ನನ್ನು ಪ್ರಧಾನಿಯನ್ನೇಕೆ ಮಾಡಲಿಲ್ಲ ಸೋನಿಯಾ?.. 

ಇಂದಿರಾಗಾಂಧಿ ನಿಧನರಾದಾಗ ಪ್ರಧಾನಿಯಾಗುವ ಅವಕಾಶವಿದ್ದರೂ ಪಕ್ಷದ ಹಿತದೃಷ್ಟಿಯಿಂದ ರಾಜೀವ್‌ಗಾಂಧಿಗೋಸ್ಕರ ಅವರಿಗೆ ಪಿಎಂ ಪದವಿಯನ್ನು ತ್ಯಾಗ ಮಾಡಿದ ಮಹಾನ್‌ ವ್ಯಕ್ತಿ. ರಾಷ್ಟ್ರಪತಿಯಂತಹ ಹುದ್ದೆಯನ್ನು ಅಲಂಕರಿಸಿದ್ದರೂ ಎಂದಿಗೂ ಅಹಂಕಾರ ಪಡೆದ, ತಾವುಗಳಿಸಿದ ವಿದ್ವತ್‌ಗೆ ಧಕ್ಕೆಯಾಗದಂತೆ ನಡೆದುಕೊಂಡರು. ಅವರ ಸಾವು ಇಡೀ ರಾಜಕಾರಣಕ್ಕೆ ತುಂಬಲಾರದ ನಷ್ಟಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ತಮ್ಮ ಬುದ್ಧಿಮತ್ತೆ ಮತ್ತು ಚಣಾಕ್ಷ ನಡೆಯಿಂದ ಎಂತಹ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಇಂದಿರಾಗಾಂಧಿಗೆ ಆಪ್ತರಾಗಿದ್ದರು. ಚುನಾವಣೆಯಲ್ಲಿ ಸೋತ ಸಂದರ್ಭದಲ್ಲಿಯೂ ಅವರ ಸೇವೆಯ ಅಗತ್ಯತೆಯನ್ನು ಮನಗಂಡ ಇಂದಿರಾಗಾಂಧಿ ಅವರನ್ನು ಮಂತ್ರಿಯನ್ನಾಗಿ ಮಾಡುವ ಮೂಲಕ ಅವರಿಗೆ ಗೌರವ ನೀಡಿದ್ದರೂ ಎಂದರು.

ಪ್ರದೇಶ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಇಕ್ಬಾಲ್‌ ಅಹಮದ್‌ ಮಾತನಾಡಿ, ಪಕ್ಷ ನಿಷ್ಠೆ ಮತ್ತು ವಿದ್ವತ್‌ಗೆ ಹೆಸರಾಗಿದ್ದ ಮುಖರ್ಜಿ ಅವರ ಸಾವು ದೇಶಕ್ಕೆ ನಷ್ಟವನ್ನು ಉಂಟು ಮಾಡಿದೆ. ಅವರ ಮಾರ್ಗದರ್ಶನ ಇಂತಹ ಸಂದರ್ಭದಲ್ಲಿ ಅಗತ್ಯವಾಗಿತ್ತು ಎಂದರು.

ಅಧ್ಯಕ್ಷತೆ ವಹಿಸಿದ್ದ ಆರ್‌.ರಾಮಕೃಷ್ಣ ಮಾತನಾಡಿ, ಪಕ್ಷ ನಿಷ್ಠೆ ತಾನಾಗಿಯೇ ಉನ್ನತ ಸ್ಥಾನಗಳನ್ನು ಗಳಿಸಿಕೊಡುತ್ತದೆ ಎಂಬುದಕ್ಕೆ ಪ್ರಣಬ್‌ ಮುಖರ್ಜಿಯವರ ಜೀವನವೇ ಸಾಕ್ಷಿ. ಉಪನ್ಯಾಸಕರಾಗಿದ್ದವರು ರಾಜಕಾರಣಕ್ಕೆ ಬಂದು, ತಾವು ಪಡೆದ ಜ್ಞಾನವನ್ನು ಧಾರೆ ಎರೆದು, ದೇಶದ ಅರ್ಥಿಕ ಸಮಸ್ಯೆಗಳಿಂದ ಮುಕ್ತಗೊಳಿಸಿದವರು. ಅವರ ಜೀವನ ನಮ್ಮೆಲ್ಲರಿಗೂ ಮಾದರಿಯಾಗಬೇಕೆಂದರು.

'ಗಾಂಧೀಜಿ ಕೊಂದ RSS ಶಿಬಿರದಲ್ಲಿ ಪ್ರಣಬ್ ಭಾಷಣ ಮಾಡಿದ್ದು ನನಗೆ ಯಕ್ಷ ಪ್ರಶ್ನೆ'

ಜಿಲ್ಲಾ ಉಪಾಧ್ಯಕ್ಷ ರೇವಣ್ಣ ಸಿದ್ದಯ್ಯ ಮಾತನಾಡಿ, ದೇಶದ ಅರ್ಥಿಕವಾಗಿ ಅಧೋಗತಿಗೆ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಆರ್ಥಿಕ ತಜ್ಞರಾಗಿ ದೇಶ ವಿದೇಶಗಳಲ್ಲಿ ಹೆಸರು ವಾಸಿಯಾದ ಪ್ರಣಮ್‌ ಮುಖರ್ಜಿ ಅವರ ಸೇವೆ ಭಾರತಕ್ಕೆ ಅಗತ್ಯವಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಡಾ.ಇಂತಿಯಾಜ್‌ ಅಹಮದ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಆಟೋರಾಜು, ಮೆಹಬೂಬ್‌ ಪಾಷ, ಕೆಂಪಣ್ಣ, ವಿಜಯಕುಮಾರ್‌,ಯುವ ಕಾಂಗ್ರೆಸ್‌ನ ಶರತ್‌ಕುಮಾರ್‌, ಎನ್‌.ಎಸ್‌.ಯು ಐ ಸುಮುಖ ಕೊಂಡವಾಡಿ, ಮಹಿಳಾ ಘಟಕದ ನಾಗಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.