Tumakur : ಜೆಇ ಲಸಿಕೆ ಅಭಿಯಾನ ಯಶಸ್ವಿಗೊಳಿಸಿ : ಡೀಸಿ
ಜಿಲ್ಲೆಯಲ್ಲಿ ಡಿಸೆಂಬರ್ 5ರಿಂದ ಹಮ್ಮಿಕೊಂಡಿರುವ ಸರ್ಕಾರಿ, ಖಾಸಗಿ ಶಾಲೆಯ 1ರಿಂದ 15 ವರ್ಷ ವಯೋಮಾನದ ಮಕ್ಕಳಿಗೆ ಜೆ.ಇ.ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮದ ಯಶಸ್ವಿಗಾಗಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು (ನ.30): ಜಿಲ್ಲೆಯಲ್ಲಿ ಡಿಸೆಂಬರ್ 5ರಿಂದ ಹಮ್ಮಿಕೊಂಡಿರುವ ಸರ್ಕಾರಿ, ಖಾಸಗಿ ಶಾಲೆಯ 1ರಿಂದ 15 ವರ್ಷ ವಯೋಮಾನದ ಮಕ್ಕಳಿಗೆ ಜೆ.ಇ.ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮದ ಯಶಸ್ವಿಗಾಗಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ಸಂಜೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಜೆ.ಇ. ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿರುವುದರಿಂದ ಯಾವುದೇ ಗೊಂದಲವಾಗದಂತೆ 1 ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳಿಗೆ ಲಸಿಕೆ ನೀಡಬೇಕು. ಲಸಿಕೆಯಿಂದ ಯಾವ ಮಗುವೂ ತಪ್ಪಿ ಹೋಗಬಾರದು. ಶಾಲೆ ಬಿಟ್ಟಮಕ್ಕಳನ್ನೂ ಸಹ ಪತ್ತೆ ಹಚ್ಚಿ ಲಸಿಕೆ ನೀಡಬೇಕೆಂದು ನಿರ್ದೇಶನ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವದ ಲಸಿಕಾ ಅಭಿಯಾನ ಕಾರ್ಯಕ್ರಮ ಇದಾಗಿದ್ದು, ಅಭಿಯಾನ ಕುರಿತು ನಗರ ಪ್ರದೇಶ ಸೇರಿದಂತೆ ಗ್ರಾಮ ಮಟ್ಟದಲ್ಲಿ ಅಗತ್ಯ ಪ್ರಚಾರ ಕೈಗೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಸರ್ಕಾರಿ/ಖಾಸಗಿ ಶಾಲಾ ಮುಖ್ಯಸ್ಥರ ಸಭೆ ನಡೆಸಿ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಮನವರಿಕೆ ಮಾಡಬೇಕು. ಶಾಲಾ ಮುಖ್ಯಸ್ಥರು ಮಕ್ಕಳ ಪೋಷಕರ ಸಭೆ ಕರೆದು ತಪ್ಪದೇ ಮಕ್ಕಳಿಗೆ ಲಸಿಕೆ ಹಾಕಿಸುವ ಬಗ್ಗೆ ಅರಿವು ಮೂಡಿಸಬೇಕೆಂದರಲ್ಲದೆ ಡಿಸೆಂಬರ್ 1ರಂದು ವಿಶ್ವ ಏಡ್‌್ಸ ನಿಯಂತ್ರಣ ದಿನಾಚರಣೆ ಪ್ರಯುಕ್ತ ತಾಲೂಕು ಮಟ್ಟದಲ್ಲಿ ಜಾಥಾ ಸೇರಿದಂತೆ ವಿವಿಧ ಅರಿವು ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದು ಸೂಚನೆ ನೀಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಜಿಲ್ಲಾದ್ಯಂತ ಮತದಾರರ ಪಟ್ಟಿವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, 18 ವರ್ಷ ತುಂಬಿದ ಅರ್ಹ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ 18 ರಿಂದ 19 ವರ್ಷದೊಳಗಿನ ಯುವ ಮತದಾರರನ್ನು ಮತದಾರರ ಪಟ್ಟಿಗೆ ನೋಂದಾಯಿಸಲು ಸಹಾಯಕ ಚುನಾವಣಾ ನೋಂದಣಾಧಿಕಾರಿಗಳನ್ನು(ಎಇಆರ್‌ಓ) ನೇಮಕ ಮಾಡಲಾಗಿದ್ದು, ಎಇಆರ್‌ಓಗಳು ಪದವಿ ಪೂರ್ವ/ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಈವರೆಗೂ ಮತದಾರರ ಪಟ್ಟಿಗೆ ನೋಂದಾಯಿಸದ ಯುವ ಮತದಾರರನ್ನು ಪತ್ತೆ ಹಚ್ಚಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ನಿಯೋಜಿತ ಅಧಿಕಾರಿಗಳು ಮತದಾರರ ಪಟ್ಟಿವಿಶೇಷ ಸಂಕ್ಷಿಪ್ತ ಪರಿಷ್ಕರಣೆಗಾಗಿ ಮನೆ-ಮನೆಗೆ ಭೇಟಿ ನೀಡಿ ಮರಣ ಹೊಂದಿದವರು, ಸ್ಥಳಾಂತರಗೊಂಡವರು, ಹೊಸ ಮತದಾರರ ನಿಖರ ಮಾಹಿತಿ ಪಡೆದು ಮತದಾರರ ಪಟ್ಟಿಯಲ್ಲಿ ಸೇರ್ಪಡೆ/ತೆಗೆದು ಹಾಕುವ/ ತಿದ್ದುಪಡಿ ಮಾಡುವ ಕಾರ್ಯ ಮಾಡಬೇಕು. ಮರಣ ಹೊಂದಿದವರ ಹೆಸರನ್ನು ನಿರ್ದಿಷ್ಟಮಾಹಿತಿ ಪಡೆದ ನಂತರವೇ ಪಟ್ಟಿಯಿಂದ ತೆಗೆದು ಹಾಕಬೇಕು. ಮತದಾರರ ಪಟ್ಟಿವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸ್ವೀಕೃತವಾಗಿರುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ಬಾಕಿ ಉಳಿಸಿಕೊಳ್ಳದೆ ತ್ವರಿತವಾಗಿ ವಿಲೇವಾರಿ ಮಾಡಬೇಕು, ಜಿಲ್ಲೆಯಲ್ಲಿರುವ ವಿಶೇಷಚೇತನ ಮತದಾರರನ್ನು ಪತ್ತೆ ಹಚ್ಚಿ ನೋಂದಣಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ವೋಟರ್ ಹೆಲ್ಪ್ ಲೈನ್ ಮೊಬೈಲ್ ಆ್ಯಪ್ ಮೂಲಕ ಪರಿಶೀಲಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಆಭಾ ಕಾರ್ಡ್ ವಿತರಣೆ, ಸ್ಮಶಾನ ಭೂಮಿ ಮಂಜೂರು, ವಸತಿ ಯೋಜನೆಯಡಿ ನಿವೇಶನ ಮಂಜೂರು, ಅಭಾ ಕಾರ್ಡ್ ವಿತರಣೆ, ಕೋವ್ಯಾಕ್ಸಿನ್/ಕೋವಿಶೀಲ್ಡ್ ಲಸಿಕಾಕರಣ ಪ್ರಗತಿ ಸೇರಿಂತೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಸುಜಯ್, ಆರ್‌ಸಿಎಚ್ ಅಧಿಕಾರಿ ಡಾ. ಕೇಶವರಾಜ್, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಮೋಹನ್ ದಾಸ್, ಜಿಲ್ಲಾ ಏಡ್‌್ಸ ನಿಯಂತ್ರಣ ಅಧಿಕಾರಿ ಡಾ. ಸನತ್ ಕುಮಾರ್, ಆಹಾರ ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿ: ಸಿಇಒ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಸ್ವೀಪ್ ಕಾರ್ಯಕ್ರಮದಡಿ ಕಾಲೇಜುಗಳಲ್ಲಿ ಭಾರತ ಸಂವಿಧಾನ, ಮತದಾನದ ಮಹತ್ವ, ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕಾಲೇಜು ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳು ಮತದಾರರ ಪಟ್ಟಿಗೆ ನೋಂದಾಯಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ತಿಪಟೂರು ತಾಲೂಕಿನಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಇತ್ತೀಚೆಗೆ ಮೇಣದ ಬತ್ತಿ ಹಚ್ಚಿ ದೀಪ ಬೆಳಗಿಸುವ ಮೂಲಕ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದ ರೀತಿಯಲ್ಲಿ ಉಳಿದ ತಾಲೂಕುಗಳಲ್ಲಿಯೂ ಹೊಸ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸಬೇಕು ಎಂದರು.