ಮಾಜಿ ಸಿಎಂ ಸಿದ್ದರಾಮಯ್ಯ ಅವರ 'ಸ್ಟಿಂಗ್ ಆಪರೇಷನ್' ವೈರಲ್ ವಿಡಿಯೋ ಸಂಪೂರ್ಣ ನಕಲಿ ಎಂದು ಸಿಸಿಬಿ ತನಿಖೆಯಿಂದ ದೃಢಪಟ್ಟಿದೆ. 2011ರ ಘಟನೆಗೆ ಸಂಬಂಧಿಸಿದಂತೆ 2023ರಲ್ಲಿ ಈ ವಿಡಿಯೋ ಸೃಷ್ಟಿಸಲಾಗಿದ್ದು, ದೆಹಲಿಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 'ಸ್ಟಿಂಗ್ ಆಪರೇಷನ್' ವಿಚಾರದಲ್ಲಿ ಕ್ಲೀನ್ಚಿಟ್ ಸಿಕ್ಕಿದೆ. ಸ್ಟಿಂಗ್ ಆಪರೇಷನ್' ಹೆಸರಿನ ವೈರಲ್ ವಿಡಿಯೋ ಸಂಪೂರ್ಣವಾಗಿ ಸುಳ್ಳು ಮತ್ತು ಕಟ್ಟುಕಥೆಯಾಗಿದೆ. ಇದು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಷಡ್ಯಂತ್ರ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಬೆನ್ನಲ್ಲೇ ಸಿದ್ದರಾಮಯ್ಯ ಅವರ ಪುತ್ರ, ಸಚಿವ ಡಾ.ಯತೀಂದ್ರ ಅವರು ಪ್ರತಿಕ್ರಿಯಿಸಿದ್ದಾರೆ.
ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?
ಸತ್ಯಕ್ಕೆ ಜಯ ಸಿಕ್ಕಿದೆ. ವಿಡಿಯೋ ಮಾಡಿದವರು ಕೂಡ ಇದು ಫೇಕ್ ಅಂದಿದ್ದರು. ಮತ್ತೆ ನಾನೇ ಮಾಡಿದ್ದು ಅಂತಲೂ ಹೇಳಿದ್ದರು. ಮುಸ್ಲಿಂ ಮಹಿಳೆ ಮಾತಾಡಿದ್ದು ಕೂಡ ಫೇಕ್ ಎಂದಿದ್ದರು. ಆಮೇಲೆ ಯಾರು ಇದನ್ನು ಹಂಚಿದ್ದಾರೆ, ಅವರಿಗೂ ಕ್ರಮ ಆಗಬೇಕು. ದೆಹಲಿಯವರೇ ಇರಲಿ, ಯಾರೇ ಇರಲಿ, ಅವರ ವಿರುದ್ಧ ಕ್ರಮ ಆಗಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸಿಸಿಬಿ ಹೇಳಿದ್ದೇನು?
ಇದುವರೆಗೆ ಸಂಗ್ರಹಿಸಲಾದ ಸಾಕ್ಷ್ಯಗಳು ಮತ್ತು ದಾಖಲಾದ ಹೇಳಿಕೆಗಳ ಪ್ರಕಾರ.. ವಿಡಿಯೋದಲ್ಲಿ ತೋರಿಸಿರುವ ರೀತಿಯಲ್ಲಿ ಯಾವುದೇ ನೈಜ ಘಟನೆಗಳು ನಡೆದಿಲ್ಲ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವ್ಯಕ್ತಿಗಳನ್ನು ಗುರುತಿಸಿ ವಿಚಾರಣೆ ನಡೆಸಲಾಗಿದೆ. ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರೀ ವಿಚಾರಣೆಗೆ ಒಳಪಡಿಸಲಾಗಿದೆ. ವಿಡಿಯೋದಲ್ಲಿ ಸೂಚ್ಯವಾಗಿ ಆರೋಪಿಸಲಾದ ವ್ಯಕ್ತಿಗಳ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಕಟ್ಟುಕಥೆ ಎಂದು ಅನ್ನೋದು ಮೇಲ್ನೋಟಕ್ಕೆ ದೃಢಪಟ್ಟಿದೆ..
ವಿಡಿಯೋ ಚಿತ್ರೀಕರಿಸಲು ಬಳಸಲಾದ ಮೂಲ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಪ್ರಕರಣದಲ್ಲಿ ಅತಿ ಮುಖ್ಯ ಅಂಶವೆಂದರೆ.. 2011ರಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಬರೋಬ್ಬರಿ 12 ವರ್ಷಗಳ ನಂತರ, ಅಂದರೆ 2023ರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಇಷ್ಟು ವರ್ಷಗಳ ನಂತರ ಯಾವ ದುರುದ್ದೇಶದಿಂದ ವಿಡಿಯೋ ಸೃಷ್ಟಿಸಲಾಯಿತು ಮತ್ತು ಇದನ್ನು ಕೃತಕವಾಗಿ ತಿರುಚಲಾಗಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಯೂಟ್ಯೂಬ್ ಮತ್ತು ಎಕ್ಸ್ ಖಾತೆಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಲು VPN, ನಕಲಿ ಐಪಿ IP ವಿಳಾಸ ಹಾಗೂ ವರ್ಚುವಲ್ ನಂಬರ್ಗಳನ್ನು ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಯೂಟ್ಯೂಬ್ಗೆ ವಿಡಿಯೋ ಅಪ್ಲೋಡ್ ಮಾಡಲು ಬಳಸಲಾದ ಮೊಬೈಲ್ ಅನ್ನು ದೆಹಲಿಯ ಹಳೆಯ ಮೊಬೈಲ್ ಅಂಗಡಿಯಿಂದ ಖರೀದಿಸಲಾಗಿತ್ತು. ದೆಹಲಿ ಎನ್ಸಿಆರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಸೈಬರ್ ಪೊಲೀಸರು, ಮೊಬೈಲ್ ಖರೀದಿಗೆ ಸಂಬಂಧಿಸಿದಂತೆ ಸ್ವತಂತ್ರ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿದ್ದ ಓರ್ವ ಆರೋಪಿಯನ್ನು ಅಕ್ಟೋಬರ್ 24 ರಂದು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಈತನಿಗೆ ನವದೆಹಲಿಯಲ್ಲಿರುವ ಕೆಲ ಪ್ರಭಾವಿ ರಾಜಕೀಯ ಸಂಪರ್ಕಗಳು ಇರುವುದು ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






