ಕೂಡ್ಲಿಗಿ: ಲಾರಿ ಡಿಕ್ಕಿ, ಸ್ಥಳದಲ್ಲೇ ಕರಡಿ ಸಾವು
* ಬೆಂಗಳೂರಿನಿಂದ ಮಧ್ಯಪ್ರದೇಶದ ಕಡೆಗೆ ಹೊರಟಿದ್ದ ಲಾರಿ
* ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದ ಘಟನೆ
* ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ
ಕೂಡ್ಲಿಗಿ(ಆ.23): ರಸ್ತೆ ದಾಟುತ್ತಿದ್ದ ಕರಡಿಯೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಥಳದಲ್ಲಿಯೇ ಅಸು ನೀಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಲಾರಿಯೂ ಪಲ್ಟಿಯಾಗಿದ್ದು, ಚಾಲಕ, ಕ್ಲೀನರ್‌ಗೆ ಗಾಯಗಳಾಗಿರುವ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರ ಬೆಂಗಳೂರು ರಸ್ತೆಯಲ್ಲಿ ಭಾನುವಾರ ನಸುಕಿನ ಜಾವ 4 ಗಂಟೆಗೆ ನಡೆದಿದೆ.
ಕರಡಿ ಕೂಡ್ಲಿಗಿ ಸಮೀಪ ರಾಷ್ಟ್ರೀಯ ಹೆದ್ದಾರಿ ಮೂಲಕ ರೈತರ ಜಮೀನುಗಳ ಕಡೆಗೆ ರಸ್ತೆ ದಾಟುತ್ತಿರುವಾಗ ಈ ಘಟನೆ ನಡೆದಿದೆ. ಹಳೆಯ ಟೈರ್ ತುಂಬಿಕೊಂಡ ಲಾರಿಯೊಂದು ಬೆಂಗಳೂರಿನಿಂದ ಮಧ್ಯಪ್ರದೇಶದ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡ ಲಾರಿಯ ಚಾಲಕ ಮತ್ತು ಕ್ಲೀನರ್‌ನನ್ನು ತಕ್ಷಣ ಪೊಲೀಸ್ ಇಲಾಖೆಯ ಹೈವೇ ಪೆಟ್ರೋಲಿಂಗ್ ಹಾಗೂ 112 ವಾಹನದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನೊಳಗೆ ಸೇರಿಕೊಂಡ ಕರಡಿ, ಸೀಟು, ಡ್ಯಾಶ್‌ಬೋರ್ಡ್ ಎಲ್ಲಾ ಪುಡಿ ಪುಡಿ!
ಸುದ್ದಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತಪಟ್ಟಿರುವುದು 8 ರಿಂದ 10 ವರ್ಷದ ಗಂಡು ಕರಡಿಯಾಗಿದೆ ಎಂದು ಅಂದಾಜಿಸಲಾಗಿದೆ. ಪಶು ವೈದ್ಯಾಧಿಕಾರಿಗಳು ಶವ ಪರೀಕ್ಷೆ ನಡೆಸಿದರು. ಕೂಡ್ಲಿಗಿ ಅರಣ್ಯ ಇಲಾಖೆಯ ಪ್ರಭಾರಿ ಎಸಿಎಫ್ ಕಂಠೆಪ್ಪ ಹಾಗೂ ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಮಂಜುನಾಥ ಹಾಗೂ ಸಿಬ್ಬಂದಿ ಸೇರಿ ಅರಣ್ಯ ಇಲಾಖೆಯ ಹಿಂಬದಿಯ ಆವರಣದಲ್ಲಿ ಭಾನುವಾರ ಬೆಳಗ್ಗೆ ಕರಡಿಯ ಅಂತ್ಯ ಸಂಸ್ಕಾರ ನಡೆಸಿದರು.