ರಾಜಕಾರಣಿಗಳ ಸ್ವಯಂಕೃತ ಅಪರಾಧದಿಂದ ಜನರಿಗೆ ತೊಂದರೆ

ಕಾವೇರಿ ನೀರು ವಿವಾದದಲ್ಲಿ ರಾಜಕಾರಣಿಗಳು, ಕಾನೂನು ಸಲಹೆಗಾರರ ಸ್ವಯಂಕೃತ ಅಪರಾಧದಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ದೂರಿದರು.

Trouble for people by self -inflicted offense of politicians snr

  ಮೈಸೂರು :  ಕಾವೇರಿ ನೀರು ವಿವಾದದಲ್ಲಿ ರಾಜಕಾರಣಿಗಳು, ಕಾನೂನು ಸಲಹೆಗಾರರ ಸ್ವಯಂಕೃತ ಅಪರಾಧದಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ದೂರಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಮಂಗಳವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಕರ್ನಾಟಕದ ಮೂರು ರಾಜಕೀಯ ಪಕ್ಷಗಳು ಮತ್ತು ವಕೀಲ ಎಫ್.ಎಸ್. ನಾರಿಮನ್ಅವರು ಮಾಡಿದ ತಪ್ಪುಗಳಿಂದ ಕರ್ನಾಟಕದ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ ಎಂದರು.

ಸಂವಿಧಾನದ 262ನೇ ಪರಿಚ್ಛೇದದ ಪ್ರಕಾರ ನ್ಯಾಯಾಲಯಕ್ಕೆ ನದಿಗಳ ವಿವಾದವನ್ನು ಇತ್ಯರ್ಥಪಡಿಸುವ ತೀರ್ಪು ಕೊಡುವ ಅಧಿಕಾರ ಇಲ್ಲ. ಆದರೆ, 1980ರ ದಶಕದಲ್ಲಿ ತಮಿಳು ರೈತರ ಸಂಘ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿತು. ಅಲ್ಲದೆ, 1990ರಲ್ಲಿ ಕಾವೇರಿ ನ್ಯಾಯ ಮಂಡಲಿ ಸ್ಥಾಪಿಸುವಂತೆ ಆದೇಶ ನೀಡಿದ್ದು ಸಂವಿಧಾನ ಬಾಹಿರ. ಇದನ್ನು ವಕೀಲ ಎಫ್.ಎಸ್. ನಾರಿಮನ್ಯಾಕೇ ಪ್ರಶ್ನಿಸಲಿಲ್ಲ ಎಂದರು.

1991ರಲ್ಲಿ ಜನ, ಜಾನುವಾರು ಸಂಖ್ಯೆಯನ್ನು ನೀಡಲಾಯಿತು. 2001ರಲ್ಲಿ ಕರ್ನಾಟಕ ಜನ ಜಾನುವಾರು ಸಂಖ್ಯೆ ನೀಡಲಿಲ್ಲ. ನ್ಯಾಯಾಧೀಶರು ಅಂದಾಜಿನ ಮೇಲೆ ಸಂಖ್ಯೆ ಬರೆದುಕೊಂಡರು. ಮಳೆ ಎಷ್ಟು ಬಂತು? ಎಷ್ಟು ನೀರಿದೆ? ಮಾಹಿತಿ ಇಲ್ಲ. ಕಾವೇರಿ ವಿಚಾರದಲ್ಲಿ ನಾಡಿನ ಮೂರು ಪಕ್ಷಗಳು ಅಪರಾಧಿಗಳಾಗಿವೆ. ವಕೀಲರು ಏನು ವಾದ ಮಾಡುತ್ತಿದ್ದಾರೆ ಎಂದು ಪರಿಶೀಲಿಸಲಿಲ್ಲ. ತಮಿಳುನಾಡಿನಲ್ಲಿ ಹುಟ್ಟಿದ ನಾರಿಮನ್ಅವರನ್ನು ನಂಬಿದ ಕೇರಳ, ಕರ್ನಾಟಕ ರಾಜ್ಯಗಳು ಹಾಳಾದವು. ಎಲ್ಲರ ತಲೆ ಮೇಲೆ ಚಪ್ಪಡಿ ಎಳೆದರು ಎಂದು ಅವರು ಆರೋಪಿಸಿದರು.

ಕಾವೇರಿ ವಿವಾದವನ್ನು ಬಗೆಹರಿಸುವುದು ಅಷ್ಟು ಸುಲಭವಲ್ಲ. ಪ್ರಧಾನಿ ಮೋದಿ ಮಧ್ಯಪ್ರವೇಶಿಸಿದರೂ ಸಾಧ್ಯವಾಗುವುದಿಲ್ಲ. ಪಾರ್ಲಿಮೆಂಟ್ಕೂಡ ಬದಲಾಯಿಸುವುದು ಕಷ್ಟ. ರಾಷ್ಟ್ರೀಯ ಜಲ ನೀತಿ ಇಲ್ಲದಿರುವ ಕಾರಣ ಸಮಸ್ಯೆ ಜೀವಂತವಾಗಿದೆ. ಸಂಕಷ್ಟ ಸಮಯದಲ್ಲಿ ಸಂಗ್ರಹವಾಗಿರುವ ನೀರನ್ನು ಸಮಾನಾಂತರವಾಗಿ ಹಂಚಿಕೊಳ್ಳುವಂತೆ ನಿಯಮ ರೂಪಿಸಬೇಕಿತ್ತು. ಕರ್ನಾಟಕ ಸರ್ಕಾರ ಕುಡಿಯುವ ನೀರಿಗೆ ಮೀಸಲು ಕೊಡುವಂತೆ ಕೇಳಬೇಕಿತ್ತು. ಈವರೆಗೂ ಕೇಳಲಿಲ್ಲ. ಮನವಿ ಸಲ್ಲಿಸದಿದ್ದರೆ ಫಲ ಸಿಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಅಂತರ ರಾಜ್ಯಗಳ ನದಿ ವಿವಾದವನ್ನು ಬಗೆಹರಿಸಲು ಮುಖ್ಯ ನ್ಯಾಯಾಧೀಶರು ನಿರಾಕರಿಸಿದರೆ, ಸಂವಿಧಾನದ 263ನೇ ಪರಿಚ್ಛೇದ ಪ್ರಕಾರ ರಾಷ್ಟ್ರಪತಿಗೆ ಮನವಿ ಸಲ್ಲಿಸಬಹುದು. ಅವರು ಯಾವುದೇ ಪ್ರದೇಶಕ್ಕೆ ಅನ್ಯಾಯವಾಗಿದ್ದರೆ ಸಮಿತಿ ನಿಯೋಜಿಸಿ ವರದಿ ತರಿಸಿಕೊಂಡು ಪರಿಹಾರ ನೀಡಬಹುದು. ಬೀದಿ ಹೋರಾಟ, ಗಲಾಟೆ, ಬಂದ್ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹಣ್ಯ, ಉಪಾಧ್ಯಕ್ಷ ಅನುರಾಗ್ ಬಸವರಾಜ್, ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ಇದ್ದರು.

-ಮೇಕೆದಾಟು ಸಾಧ್ಯವೇ ಇಲ್ಲ

ಮೇಕೆದಾಟು ಯೋಜನೆ ಸಾಧ್ಯವೇ ಇಲ್ಲ. ಏಕೆಂದರೆ ಆನೆ ಕಾರಿಡಾರ್ಮತ್ತು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಡ್ಯಾಂ ನಿರ್ಮಾಣಕ್ಕೆ ಹಸಿರು ನ್ಯಾಯಾಧೀಕರಣ ಅನುಮತಿ ನೀಡುವುದಿಲ್ಲ. ಗಟ್ಟಿ ಭೂ ಪ್ರದೇಶ ಇಲ್ಲದಿರುವುದರಿಂದ ಜಿಯಾಲಿಜಿಕಲ್ಇಲಾಖೆ ಅನುಮತಿ ದೊರೆಯುವುದು ಕಷ್ಟ. ಅಲ್ಲದೆ, ಕಾವೇರಿ ಭೌಗೋಳಿಕವಾಗಿ ಕಾವೇರಿ ನದಿಯೂ ಅದೃಶ್ಯವಾಗಿ ಹರಿಯುತ್ತಿದೆ. ರಾಜಕಾರಣಿಗಳು ಇದನ್ನು ಟ್ರಂಪ್‌ ಕಾರ್ಡ್‌ ಆಗಿ ಬಳಸುತ್ತಿದ್ದಾರೆ ಎಂದು ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ತಿಳಿಸಿದರು.

Latest Videos
Follow Us:
Download App:
  • android
  • ios