ಬೆಂಗಳೂರು [ಜು.28] :  ಯುವಕರನ್ನು ಅಡ್ಡಗಟ್ಟಿಹಲ್ಲೆ ನಡೆಸಿ ಮೊಬೈಲ್‌ ಹಾಗೂ ಹಣ ದೋಚಿದ್ದ ಇಬ್ಬರು ಮಂಗಳಮುಖಿಯರನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೊಳಗಾಗಿದ್ದ ಉತ್ತರ ಪ್ರದೇಶ ಮೂಲದ ಸುಮನ್‌ ಹಾಗೂ ಶಂಕರ್‌ ನೀಡಿದ ಮಾಹಿತಿ ಆಧರಿಸಿ ಇಬ್ಬರು ಮಂಗಳಮುಖಿಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸುಮನ್‌ ಹಾಗೂ ಶಂಕರ್‌ ಕಸ್ತೂರಿನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಇಬ್ಬರು ಟಿನ್‌ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದರು. ಗುರುವಾರ ಎರಡನೇ ಪಾಳಿ ಕೆಲಸ ಮುಗಿಸಿಕೊಂಡು ತಡರಾತ್ರಿ 1.30ರ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದರು. ರೈಲ್ವೆ ಮೇಲ್ಸೇತುವೆ ಬಳಿ ಬೈಕ್‌ ಬಂದಾಗ ಅಡ್ಡಗಟ್ಟಿಹಲ್ಲೆ ನಡೆಸಿರುವ ಮಂಗಳಮುಖಿಯರು ಆರು ಸಾವಿರ ನಗದು ಮತ್ತು ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಇಬ್ಬರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.