ಹುಬ್ಬಳ್ಳಿ(ಸೆ.30): ವಿದೇಶದಲ್ಲಿನ ಅತ್ಯುತ್ತಮ ಪೊಲೀಸ್‌ ತರಬೇತಿ ಶಾಲೆಗಳಲ್ಲಿ ರಾಜ್ಯದ ಪೊಲೀಸರಿಗೆ ಹಂತ ಹಂತವಾಗಿ ತರಬೇತಿ ಕೊಡಿಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಗೋಕುಲ ರಸ್ತೆಯ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯಲ್ಲಿ 6ನೇ ತಂಡದ 131 ನಾಗರಿಕ ಪೊಲೀಸ್‌ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನ ವೀಕ್ಷಿಸಿ ಮಾತನಾಡಿದ ಅವರು, ರಾಜ್ಯದ 14 ಪೊಲೀಸ್‌ ತರಬೇತಿ ಕೇಂದ್ರಗಳಲ್ಲಿ ಸಾವಿರಾರು ಜನರಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ. ಇದರ ಜತೆಗೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ವಿಧಿವಿಜ್ಞಾನ, ಸೈಬರ್‌ ಅಪರಾಧ ಪತ್ತೆಗೆ ಹೆಸರುವಾಸಿಯಾಗಿರುವ ತರಬೇತಿ ಶಾಲೆಗಳಿಗೆ ರಾಜ್ಯದ ಪೊಲೀಸರನ್ನು ಹಂತ-ಹಂತವಾಗಿ ಕಳಿಸಿಕೊಡಲಾಗುವುದು. ಆ ಮೂಲಕ ನಮ್ಮ ಪೊಲೀಸರನ್ನು ಇನ್ನಷ್ಟು ಕ್ರೀಯಾಸೀಲಗೊಳಿಸಲು ಸರ್ಕಾರ ಚಿಂತಿಸುತ್ತಿದೆ. ಈಗಿರುವ ಎಲ್ಲ ಪೊಲೀಸರಿಗೆ ಸೈಬರ್‌ ಅಪರಾಧದ ನಿಯಂತ್ರಣ ತರಬೇತಿಯನ್ನೂ ನೀಡಲಾಗುವುದು ಎಂದು ಹೇಳಿದರು.

ಪೊಲೀಸ್‌ ವೇತನದ ಪರಿಷ್ಕರಣೆಯ ಕುರಿತು ಸರ್ಕಾರ ಶೀಘ್ರ ನಿರ್ಧಾರ ಪ್ರಕಟಿಸಲಿದೆ. ರಾಗ-ದ್ವೇಷಗಳಲ್ಲಿದೆ ಕಾನೂನಿನ್ವಯ ನಿಷ್ಪಕ್ಷಪಾತ, ನಿರ್ಭಯ ಮತ್ತು ನಿರ್ಭಿಡೆಗಳಿಂದ ಪೊಲೀಸರು ಕಾರ್ಯ ನಿರ್ವಹಿಸಿದರೆ ಮಾತ್ರ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಸ್ಥಾಪಿಸಿ ಪ್ರಗತಿ ಹೊಂದಲು ಸಾಧ್ಯ. ಅನ್ಯಾಯ, ಶೋಷಣೆಗಳಿದ್ದಲ್ಲಿಗೆ ತೆರಳಿ ಬಡವರಿಗೆ, ದೀನ-ದಲಿತರಿಗೆ ನಿರ್ಗತಿಕರಿಗೆ ಸೇವೆ ಸಲ್ಲಿಸುವ ಸದವಕಾಶ ಪೊಲೀಸರಿಗೆ ಇದೆ ಎಂದು ತಿಳಿಸಿದ್ದಾರೆ. 

ಅನ್ಯಾಯಕ್ಕೊಳಗಾದ ಮಹಿಳೆಯರು, ನೌಕರರು, ವಿದ್ಯಾರ್ಥಿಗಳು, ರೈತರು ಎಲ್ಲರೂ ನ್ಯಾಯ ಅರಸಿ ಪೊಲೀಸ್‌ ಇಲಾಖೆಯ ಬಳಿ ಬರುತ್ತಾರೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನಂತರ ಸಾಮಾಜಿಕ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಆಧುನಿಕ ತಂತ್ರಜ್ಞಾನವನ್ನು ದುಷ್ಟಶಕ್ತಿಗಳು ಬಳಸಿಕೊಂಡು ಸುಳ್ಳು ವದಂತಿ ಹರಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹು-ಧಾ ನಗರ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌, ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ ಪ್ರಾಚಾರ್ಯ ಡಿಸಿಪಿ ನಾಗೇಶ್‌ ಡಿ.ಎಲ್ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ವರದಿ ವಾಚಿಸಿದರು. 

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ. ಅಮರಕುಮಾರ ಪಾಂಡೆ, ಉತ್ತರ ವಲಯ ಪೊಲೀಸ್‌ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್‌, ಡಿಸಿಪಿ ಡಾ. ಶಿವಕುಮಾರ ಗುಣಾರಿ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಲ್ಲ ವಿಷಯಗಳಲ್ಲಿ ಅತ್ಯಧಿಕ ಅಂಕಗಳಿಸಿದ ಸುರೇಶ ನಾಯಕ ಸರ್ವೋತ್ತಮ ಪ್ರಶಸ್ತಿಗೆ ಪಾತ್ರರಾದರು. ನಿವೃತ್ತ ಪೊಲೀಸ್‌ ಅಧಿಕಾರಿಗಳು, ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ಕುಟುಂಬಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.