ಚಿಕ್ಕಮಗಳೂರು: ಚಾರ್ಮಾಡಿ ಘಾಟ್‌ನಲ್ಲಿ ಟ್ರಾಫಿಕ್ ಜಾಮ್, ಬೇಸತ್ತ ವಾಹನ ಸವಾರರು
ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಆಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ ಸ್ಥಳೀಯರು
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.20): ಚಾರ್ಮಾಡಿ ಘಾಟಿ ರಸ್ತೆಯ ತಿರುವಿನಲ್ಲಿ ಟ್ಯಾಂಕರ್ ಲಾರಿ ಲಾಕ್ ಆದ ಪರಿಣಾಮ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಇಂದು(ಬುಧವಾರ) ನಡೆದಿದೆ. ಇಂದು ಬೆಳಗಿನ ಜಾವ ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಟ್ಯಾಂಕರ್ ವಾಹನ ಜಾಮ್ ಆಗಿ ನಿಂತಿದ್ದರಿಂದ ಎರಡು ಗಂಟೆಗೂ ಹೆಚ್ಚು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಚಾರ್ಮಾಡಿ ಘಾಟಿ ಮಧ್ಯೆ ಟ್ರಾಫಿಕ್ ಜಾಮ್ ಆದ ಪರಿಣಾಮ ಕೊಟ್ಟಿಗೆಹಾರದಲ್ಲೂ ವಾಹನಗಳು ಸರದಿ ಸಾಲಲ್ಲಿ ನಿಂತಿದ್ದವು. ಗಂಟೆಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿದ್ದರಿಂದ ವಾಹನ ಸವಾರರು ಕೂಡ ಪರದಾಟ ಅನುಭವಿಸಿದರು.
ಟ್ಯಾಂಕರ್ ಲಾಕ್, ಗಂಟೆಗಟ್ಟಲೇ ಟ್ರಾಫಿಕ್ ಜಾಮ್
ದಕ್ಷಿಣ ಕನ್ನಡ ಮಲೆನಾಡಿನ ಸಂಪರ್ಕ ಸೇತುವೆ ಚಾರ್ಮಾಡಿ ಘಾಟಿ ದಕ್ಷಿಣ ಕನ್ನಡದಿಂದ ಬಂದ ಲಾರಿಯೊಂದು ಟ್ರಾಫಿಕ್ ಜಾಮ್ ಆದ ಪರಿಣಾಮ ಕೊಟ್ಟಿಗೆಹಾರದಲ್ಲೂ ವಾಹನಗಳು ಸರದಿ ಸಾಲಲ್ಲಿ ನಿಂತಿದ್ದವು. ಬೆಳಗಿನ ಜಾವದಿಂದಲೂ ನಿಂತಲೇ ನಿಂತಿದ್ದ ವಾಹನಗಳನ್ನು ಸುಮಾರು ಎರಡುವರೆ ಗಂಟೆಗಳ ಬಳಿಕ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಈಗಾಗಲೇ ಭಾರಿ ಮಳೆಯಿಂದಾಗಿ ಆಗುಂಬೆ ಘಾಟಿ ಹಾಗೂ ಶಿರಾಡಿ ಘಾಟಿ ಕೂಡ ಬಂದಾಗಿದೆ. ಚಾರ್ಮಾಡಿ ಘಾಟಿ ಜನೋಪಯೋಗಿ ಮಾರ್ಗವಾಗಿದ್ದು ಈ ರಸ್ತೆ ಸದ್ಯಕ್ಕೆ ಅತ್ಯಂತ ಅವಶ್ಯಕವಾಗಿದೆ. ಚಾರ್ಮಾಡಿ ಘಾಟಿ ಮಾರ್ಗವನ್ನು ಸಂಜೀವಿನಿಯ ಮಾರ್ಗ ಎಂದೇ ಕರೆಯುತ್ತಾರೆ.
ಶಿರಾಡಿ, ಚಾರ್ಮಾಡಿ ಘಾಟ್ ಮತ್ತೆ ಭೂಕುಸಿತ: ಸಂಚಾರ ಬಂದ್ ಭೀತಿ
ಜನೋಪಯೋಗಿ ಮಾರ್ಗ
ಉಡುಪಿ ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ಮೇಲೆ ಜನ ಅವಲಂಬಿತರಾಗಿದ್ದಾರೆ. ಆಸ್ಪತ್ರೆ, ಶಾಲಾ-ಕಾಲೇಜು, ಹಣ್ಣು-ತರಕಾರಿಗಳ ಸಾಗಾಟಕ್ಕೆ ಈ ಮಾರ್ಗ ಅನಿವಾರ್ಯವಾಗಿದೆ. ಒಂದು ವೇಳೆ ಈ ಮಾರ್ಗವು ಬಂದಾದರೆ ಉಡುಪಿ ಹಾಗೂ ಮಂಗಳೂರಿಗೆ ಹೋಗಲು ನೂರಾರು ಕಿಲೋಮೀಟರ್ ಸುತ್ತಿ ಬಳಸಿ ಹೋಗಬೇಕಾಗುತ್ತದೆ. ಹಾಗಾಗಿ ಈ ಮಾರ್ಗದಲ್ಲಿ ದೊಡ್ಡ ದೊಡ್ಡ ವಾಹನಗಳನ್ನು ಬಿಡಬಾರದು ಎಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದಲೂ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ವರ್ಷಪೂರ್ತಿ ತಣ್ಣನೆಯ ವಾತಾವರಣವಿರುವ ಈ ಭಾಗದಲ್ಲಿ ಭೂಮಿಯ ತೇವಾಂಶ ಕೂಡ ಹೆಚ್ಚಾಗಿರುತ್ತದೆ. ದೊಡ್ಡ ದೊಡ್ಡ ವಾಹನಗಳು ಸಂಚಾರ ಮಾಡಿದಲ್ಲಿ ಈ ಮಾರ್ಗವೂ ಬಂದಾಗುತ್ತಾ ಎಂಬ ಆತಂಕ ಸ್ಥಳೀಯರು ಹಾಗೂ ಇಡೀ ರಾಜ್ಯದ ಜನರನ್ನ ಕಾಡುತ್ತಿದೆ. ಹಾಗಾಗಿ ಜನ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಆಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.