ಕಾರವಾರ [ಡಿ.13]:  ದಾಂಡೇಲಿಯ ಕಾಳಿ ನದಿ ಸೇರಿದಂತೆ ರಾಜ್ಯದ ಪ್ರಮುಖ 15 ನದಿಗಳಲ್ಲಿನ ನೀರಿನಲ್ಲಿ ವಿಷಕಾರಕ ಅಂಶಗಳಿರುವುದು ಪತ್ತೆಯಾಗಿದ್ದು, ಒಂದು ವೇಳೆ ಈ ನೀರನ್ನು ಸೇವನೆ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಅಪಾಯ ಖಂಡಿತ. ಈ ನದಿಗಳಲ್ಲಿನ ನೀರು ಕುಡಿಯಲು ಯೋಗ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ ಎಂದು ಪರಿಸರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ ಇರುವ 302 ನದಿಗಳಲ್ಲಿನ ನೀರನ್ನು ಕುಡಿಯಲು ಯೋಗ್ಯವೇ ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ರಾಜ್ಯದ 15 ನದಿಗಳ ನೀರು ಕುಡಿಯಲು ಯೋಗ್ಯವಲ್ಲ. ಬಹುತೇಕ ನದಿಗಳಲ್ಲಿನ ನೀರಿನಲ್ಲಿ ವಿಷಕಾರಕ ಅಂಶಗಳು ಸೇರ್ಪಡೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿದೆ.

ನದಿಗಳಲ್ಲಿರುವ ನೀರನ್ನು ನೇರವಾಗಿ ಬಳಕೆ ಮಾಡದೆ ಶುದ್ಧ ಘಟಕಗಳ ಮೂಲಕ ಶುದ್ಧೀಕರಿಸಿ ಬಳಕೆ ಮಾಡಬೇಕು. ಇಲ್ಲದಿದ್ದರೆ ವಿಷಕಾರಕ ಅಂಶಗಳ ಸೇವನೆಯಿಂದ ಮನುಷ್ಯ ಜೀವಕ್ಕೆ ಹಾನಿಯಾಗಲಿದೆ ಎಂದು ಮಂಡಳಿ ಸಲಹೆ ನೀಡಿದೆ. ಕೇಂದ್ರ ಅರಣ್ಯ ಪರಿಸರ ಮತ್ತು ಜಲ ಸಂಪನ್ಮೂಲ ಇಲಾಖೆ ದೇಶದಲ್ಲಿಯ 302 ನದಿಗಳ ನೀರು ಪರೀಕ್ಷೆ ನಡೆಸಿ ವರದಿ ನೀಡುವಂತೆ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ
ಮಂಡಳಿಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅಘಾತಕಾರಿ ವಿಷಯ ಬಹಿರಂಗಗೊಂಡಿದೆ.

ಕುಷ್ಟಗಿ: ಬರದ ನಾಡಲ್ಲೂ ಆಕಾಶದೆತ್ತರಕ್ಕೆ ಚಿಮ್ಮುತ್ತಿದೆ ಕೊಳೆವೆ ಬಾವಿ ನೀರು...

ಮಂಡಳಿ ನಡೆಸಿದ ನೀರಿನ ಪರೀಕ್ಷೆಯಲ್ಲಿ ರಾಜ್ಯದ ಕಾಳಿನದಿ, ತುಂಗಭದ್ರಾ, ಕೃಷ್ಣಾ, ಲಕ್ಷಣತೀರ್ಥ, ಭದ್ರಾ, ಕಬಿನಿ ಸೇರಿದಂತೆ 15 ನದಿಗಳು ಕಲುಷಿತಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ 15 ನದಿಗಳಲ್ಲಿ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನಿರ್ದೆಶನ ನೀಡಿದೆ. ಇಲ್ಲಿಯ ಬಹುತೇಕ ನದಿಗಳಲ್ಲಿ ನಿರುಪಯುಕ್ತ ತ್ಯಾಜ್ಯಗಳನ್ನು ಬಿಸಾಡುವುದು, ಸತ್ತ ಪ್ರಾಣಿಗಳ ಎಲುಬುಗಳು, ಕೈಗಾರಿಕೆಗಳು ವಿಸರ್ಜಿಸುವ ವಿಷಕಾರಕ ತ್ಯಾಜ್ಯಗಳು, ಕಲುಷಿತ ನೀರು ಇತ್ಯಾದಿ ಅಂಶಗಳಿಂದ ನೀರು ವಿಷಕಾರಿಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ನೀರು ಶುದ್ಧೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದೆ. ಶುದ್ಧೀಕರಿಸದ ಕಲುಷಿತ ನೀರಿನ ಸೇವನೆಯಿಂದ ಮನುಷ್ಯನ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.