Asianet Suvarna News Asianet Suvarna News

ಯಾದಗಿರಿ: ಬಸವ ಸಾಗರ ಜಲಾಶಯಕ್ಕೆ ಪ್ರವಾಸಿಗರ ದಂಡು..!

* ಪ್ರವಾಹ ಎದುರಿಸಲು ಹುಣಸಗಿ ತಾಲೂಕಾಡಳಿತ ಸನ್ನದ್ಧ
* ಕೃಷ್ಣೆಯ ರಮಣೀಯ ದೃಶ್ಯ ನೋಡಲು ಆಗಮಿಸುತ್ತಿರುವ ಪ್ರವಾಸಿಗರು
* ಯಾವುದೇ ಸಮಯದಲ್ಲಾದರೂ ನೀರಿನ ಪ್ರಮಾಣ ಹೆಚ್ಚು-ಕಡಿಮೆಯಾಗುವ ಸಾಧ್ಯೆತೆ

Tourists Rush to Visit Basava Sagar Dam in Yadgir grg
Author
Bengaluru, First Published Jul 26, 2021, 3:46 PM IST

ಅನಿಲ್‌ ಬಿರಾದರ್‌

ಕೊಡೇಕಲ್‌(ಜು.26): ಭಾನುವಾರ ಬಸವಸಾಗರ ಜಲಾಶಯಕ್ಕೆ 2.88 ಲಕ್ಷ ಕ್ಯುಸೆಕ್‌ ನೀರು ಹರಿಸಿದ್ದು, ಇದರಿಂದ ಕೃಷ್ಣಾ ನದಿಗೆ ಒಳಹರಿವು ಕಡಿಮೆಯಾಗಿದೆ. ಆದರೂ ಯಾವುದೇ ಕ್ಷಣದಲ್ಲಾದರೂ ಜಲಾಶಯಕ್ಕೆ ಹೆಚ್ಚಿನ ನೀರು ಹರಿಬಿಡುವ ಸಾಧ್ಯತೆ ಇರುವುದರಿಂದ ನದಿ ಪಾತ್ರದಲ್ಲಿ ಪ್ರವಾಹದಬ್ಬರ ಶುರುವಾಗುವ ಇನ್ನೂ ಕಮ್ಮಿಯಾಗಿಲ್ಲ.

ಭಾನುವಾರ ನದಿಗೆ 4.50 ಲಕ್ಷ ಕ್ಯುಸೆಕ್‌ವರೆಗೆ ನೀರು ಹರಿಬಿಡುವ ಸಾಧ್ಯತೆವಿತ್ತು. ಆದರೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆ ಇದ್ದುದರಿಂದ 3 ಲಕ್ಷ ಕ್ಯೂಸೆಕ್‌ಗೂ ಅ​ಧಿಕವಾಗಿ ನದಿಗೆ ನೀರು ಹರಿಸಲಾಗಿದೆ. ನೀರಿನ ಪ್ರಮಾಣವನ್ನು 2.80 ಲಕ್ಷ ಕ್ಯುಸೆಕ್‌ಗೆ ಇಳಿಸಲಾಗಿದೆ. ಆದರೂ ಸಹಿತ ಜಲಾಶಯಕ್ಕೆ ಯಾವುದೇ ಸಂದರ್ಭದಲ್ಲಾದರೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದ ಆಲಮಟ್ಟಿಹಾಗೂ ಬಸವಸಾಗರ ಜಲಾಶಯಗಳು ಭರ್ತಿಯಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿ ತೀರದ ಗ್ರಾಮಸ್ಥರು ಜಾಗೃತದಿಂದರಲೂ ನಿಗಮದ ಅಧಿ​ಕಾರಿಗಳು ತಿಳಿಸಿದ್ದಾರೆ.

ತಾಲೂಕಾಡಳಿತದಿಂದ ಸಕಲ ಸಿದ್ಧತೆ:

ಒಂದು ವೇಳೆ ಜಲಾಶಯದಿಂದ 5 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಟ್ಟದ್ದೇ ಆದಲ್ಲಿ ನದಿ ತೀರದ ಗೆದ್ದಲಮರಿ, ಜುಮಾಲಪುರ ಸೇರಿದಂತೆ ಕೆಲ ಗ್ರಾವåಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಆಯಾ ಸ್ಥಳಗಳಲ್ಲಿ ಗಂಜಿ ಕೇಂದ್ರಗಳ ಸ್ಥಾಪನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನದಿಗೆ ಒಳಹರಿವು ಹೆಚ್ಚಳವಾದರೇ ನದಿ ತೀರದ ಗ್ರಾಮಸ್ಥರನ್ನು ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸಲು ತಾಲೂಕಾಡಳಿತದಿಂದ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಹುಣಸಗಿ ತಹಸೀಲ್ದಾರ್‌ ಮಹಾದೇವಪ್ಪಗೌಡ ಬಿರಾದಾರ್‌ ತಿಳಿಸಿದ್ದಾರೆ.

ಯಾದಗಿರಿ: ಕೃಷ್ಣಾ ನದಿ ತೀರದ ಜನರಿಗೆ ಮತ್ತೆ ಪ್ರವಾಹ ಭೀತಿ..!

ನಿಟ್ಟುಸಿರು ಬಿಟ್ಟ ಜನತೆ:

ಕಳೆದ ಕೆಲ ದಿನಗಳಿಂದ ಸತತವಾಗಿ ಹಂತ ಹಂತವಾಗಿ ಕೃಷ್ಣಾ ನದಿಗೆ ನೀರಿನ ಹರಿಯುವಿಕೆ ಪ್ರಮಾಣ ಅಧಿಕವಾಗಿರುವುದರಿಂದ ಕೃಷ್ಣಾ ತೀರದ ಬಂಡೋಳ್ಳಿ, ತಿಂಥಣಿ, ಬೆಂಚಿಗಡ್ಡಿ, ದೇವರಗಡ್ಡಿ, ಮೇಲಿನಗಡ್ಡಿ, ನೀಲಕಂಠ ರಾಯನಗಡ್ಡಿ ಸೇರಿ ಇತರೆ ಗ್ರಾಮಗಳ ಜನತೆಯಲ್ಲಿ ಭಾನುವಾರ ಜಲಾಶಯದಿಂದ 4.5 ಲಕ್ಷ ಕ್ಯುಸೆಕ್‌ವರೆಗೆ ನೀರು ಹರಿಬರುವ ಸಾಧ್ಯತೆವಿರುವುದರಿಂದ ಆತಂಕ ಉಂಟಾಗಿತ್ತು. ಆದರೆ, ನದಿಗೆ ಜಲಾಶಯದಿಂದ ಅಷ್ಟು ಪ್ರಮಾಣದ ನೀರು ಹರಿಬರದಿರುವುದರಿಂದ ಒಂದು ರೀತಿಯಲ್ಲಿ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ. ಆದರೂ ಯಾವುದೇ ಸಮಯದಲ್ಲಾದರೂ ನೀರಿನ ಪ್ರಮಾಣ ಹೆಚ್ಚು-ಕಡಿಮೆಯಾಗುವ ಸಾಧ್ಯೆತೆಗಳಿದ್ದು, ಇಂದಿಗೂ ಸಹ ಆತಂಕದಲ್ಲಿದ್ದಾರೆ.

ಪ್ರವಾಸಿಗರ ಆಗಮನ:

ಜಲಾಶಯದಿಂದ ನದಿಗೆ ಹರಿಬಿಡುತ್ತಿರುವ ನೀರಿನ ಸುಂದರ ದೃಶ್ಯಸೊಬಗನ್ನು ವೀಕ್ಷಿಸಲು ರಜಾದಿನವಾದ ಭಾನುವಾರದಂದು ಜಲಾಶಯಕ್ಕೆ ಸುತ್ತಮುತ್ತಲಿನ ಗ್ರಾಮದ ಜನತೆ ಕುಟುಂಬದೊಡನೆ ಹಾಗೂ ಯುವ ಸಮೂಹವು ತಮ್ಮ ನೆಚ್ಚಿನ ಸ್ನೇಹಿತರೊಂದಿಗೆ ಆಗಮಿಸಿದ್ದರು. ಹಾಗೆಯೇ ಛಾಯಾ ಭಗವತಿ ದೇವಸ್ಥಾನದ ಸಮೀಪದ ಕಾನನದ ಗುಡ್ಡ-ಗಾಡು ಪ್ರದೇಶಗಳಲ್ಲಿ ಭೋರ್ಗರೆಯುತ್ತಿರುವ ಕೃಷ್ಣೆಯ ರಮಣೀಯ ದೃಶ್ಯವನ್ನು ನೋಡಲು ಆಗಮಿಸುತ್ತಿದ್ದಾರೆ.

492.25 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 489.41 ಮೀ. ತಲುಪಿದ್ದು 21.89 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಗೇಟ್‌ಗಳ ಮೂಲಕ 30 ಗೇಟ್‌ ತೆರೆಯುವ ಮೂಲಕ 2.80 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.
 

Follow Us:
Download App:
  • android
  • ios