ತಿಪಟೂರು : ತಡೆಯಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ
ತಾಲೂಕಿನಾದ್ಯಂತ ನಗರ ಹಾಗೂ ಹಳ್ಳಿಹಳ್ಳಿಗಳಲ್ಲಿ ಎಗ್ಗಿಲ್ಲದೇ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಸಾಕಷ್ಟು ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ದೊಡ್ಡ ದಂಧೆಯಾಗಿ ನಡೆಯುತ್ತಿರುವುದು ಅಬಕಾರಿ ಇಲಾಖೆ ಹಾಗೂ ಪೊಲೀಸರಿಗೆ ಗೊತ್ತಿದ್ದರೂ ಕ್ರಮಕೈಗೊಳ್ಳುತ್ತಿಲ್ಲ
ತಿಪಟೂರು : ತಾಲೂಕಿನಾದ್ಯಂತ ನಗರ ಹಾಗೂ ಹಳ್ಳಿಹಳ್ಳಿಗಳಲ್ಲಿ ಎಗ್ಗಿಲ್ಲದೇ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಸಾಕಷ್ಟು ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ದೊಡ್ಡ ದಂಧೆಯಾಗಿ ನಡೆಯುತ್ತಿರುವುದು ಅಬಕಾರಿ ಇಲಾಖೆ ಹಾಗೂ ಪೊಲೀಸರಿಗೆ ಗೊತ್ತಿದ್ದರೂ ಕ್ರಮಕೈಗೊಳ್ಳುತ್ತಿಲ್ಲ.
ಬಹುತೇಕ ಗ್ರಾಮೀಣ ಪ್ರದೇಶಗಳ ಪೆಟ್ಟಿಗೆ ಅಂಗಡಿ ಹಾಗೂ ವಾಸದ ಮನೆಗಳಲ್ಲಿ ಈ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಕೆಲ ಮದ್ಯದ ಅಂಗಡಿ ಮಾಲೀಕರು ಇವರಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿರುವುದು ಅಬಕಾರಿ ಇಲಾಖೆಗೆ ತಿಳಿದಿದ್ದರೂ ಬೇಲಿಯೇ ಎದ್ದು ಹೊಲ ಮೆಯ್ದಂತಾಗಿದೆ ಎಂದು ಮಹಿಳೆಯರು ಆರೋಪಿಸುತ್ತಿದ್ದಾರೆ. ಇದರಿಂದ ಅನೇಕ ಸಂಸಾರಗಳು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗುತ್ತಿರುವುದಲ್ಲದೇ ಕೆಲವರು ದೌರ್ಜನ್ಯಕ್ಕೊಳಗಾಗುತ್ತಿರುವುದೂ ಕಳವಳಕಾರಿಯಾಗಿದೆ. ಪೈಪೋಟಿ ದರದಲ್ಲಿ ಕೆಲವರು ಅಕ್ರಮ ಮದ್ಯ ಮಾರಾಟ ದಂದೆಯನ್ನೇ ಮುಖ್ಯ ಕಸುಬಾಗಿಸಿಕೊಂಡಿದ್ದು ಹಳ್ಳಿಗಳಲ್ಲಿ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಪ್ರತಿನಿತ್ಯ ಕುಡಿದು ಬಂದು ಮಹಿಳೆಯರ ಮೇಲೆ ದೌರ್ಜನ್ಯ,ಅವಾಚ್ಯ ಶಬ್ದಗಳಿಂದ ಬೈಯುತ್ತಿರುವುದರಿಂದ ಮಕ್ಕಳು, ಮಹಿಳೆಯರು, ಹಿರಿಯರು ಮಾನಸಿಕ ಸಂಕಷ್ಟಕ್ಕೀಡಾಗಿದ್ದಾರೆಂದು ಮಹಿಳಾ ಸಂಘಟನೆಯವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಕುಡಿತದ ದಾಸರಾಗಿರುವ ಕೆಲವರು ಹಳ್ಳಿಗಳಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದು, ಕಳ್ಳರನ್ನು ಕಾಯುವುದೇ ಒಂದು ಕೆಲಸವಾಗಿದೆ ಎಂದು ಕಿಬ್ಬನಹಳ್ಳಿ ಕ್ರಾಸ್‌ನ ರೈತ ಪ್ರಸಾದ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ದೂರು ನೀಡುತ್ತೇವೆಂದು ಮದ್ಯ ಮಾರುವ ಮಾಲೀಕರಿಗೆ ಮಹಿಳೆಯರು ಹೇಳಿದರೆ ಏನಾದರೂ ಮಾಡಿಕೊಳ್ಳಿ ನಾವು ಯಾರಿಗೂ ಹೆದರುವುದಿಲ್ಲ. ಎಲ್ಲರಿಗೂ ಮಾಮೂಲಿ ಕೊಟ್ಟೆ ವ್ಯಾಪಾರ ಮಾಡುತ್ತಿರುವುದು ಎಂದು ರಾಜರೋಷವಾಗಿ ಹೇಳುತ್ತಾರೆಂದು ನೊಂದ ಮಹಿಳೆಯರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಹಾಗಾಗಿ ನಗರದ ಕೆಲ ಹಿಂದುಳಿದ ಪ್ರದೇಶಗಳ ಹಾಗೂ ಹಳ್ಳಿಗಳಲ್ಲಿ ನೆಮ್ಮದಿ, ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕೂಡಲೇ ಜಿಲ್ಲಾ ಅಬಕಾರಿ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ತಾಲೂಕು ಅಬಕಾರಿ ಅಧಿಕಾರಿಗಳು, ಅಕ್ರಮ ಮದ್ಯದಂಗಡಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಂಡು ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆಗೆ ಬ್ರೇಕ್ ಹಾಕುವರೇ ಕಾದು ನೋಡಬೇಕಿದೆ.
. ಬಹುತೇಕ ಎಲ್ಲ ಹಳ್ಳಿಗಳಲ್ಲಿ ಈ ದಂಧೆ ನಡೆಯುತ್ತಿದ್ದು ಈ ಬಗ್ಗೆ ಅಬಕಾರಿ ಇಲಾಖೆಗೆ ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಗೂ ಮನವಿ ಸಲ್ಲಿಸಲಾಗಿದೆ. ಆದರೆ ಯಾವ ಅಧಿಕಾರಿಗಳೂ ಗಮನಹರಿಸಿಲ್ಲ. ಚಿಕ್ಕ ಚಿಕ್ಕ ವಯಸ್ಸಿನ ಮಕ್ಕಳು, ಯುವಕರು ಸಹ ಮದ್ಯದ ದಾಸರಾಗುತ್ತಿದ್ದು ಕುಟುಂಬಗಳು ಬೀದಿ ಪಾಲಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆ ನಡೆಯಲು ಲಂಚ ತಿಂದು ಸಹಕರಿಸುವುದನ್ನು ನಿಲ್ಲಿಸಿ ಬಂದ್ ಮಾಡಬೇಕಾಗಿದೆ.
ಮಂಗಳ, ಜಯಮ್ಮ, ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯೆಯರು, ನೊಣವಿನಕೆರೆ.