Asianet Suvarna News Asianet Suvarna News

ಹೊಸ ವರ್ಷಾಚರಣೆಗೆ ಖಾಕಿ ಸರ್ಪಗಾವಲು! ಎಚ್ಚರ!

ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಖಾಕಿ ಸರ್ಪಗಾವಲು ಹಾಕಲಾಗಿದೆ. ಎಲ್ಲೆಡೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. 

Tight Security For New Year in Bengaluru
Author
Bengaluru, First Published Dec 29, 2019, 7:34 AM IST

ಬೆಂಗಳೂರು [ಡಿ.29]:  ನೂತನ ಸಂವತ್ಸರದ ಸ್ವಾಗತಕ್ಕೆ ಕ್ಷಣ ಗಣನೆ ಆರಂಭವಾದ ಬೆನ್ನಲ್ಲೇ ಎಚ್ಚೆತ್ತ ರಾಜಧಾನಿ ಖಾಕಿ ಪಡೆ, ಹೊಸ ವರ್ಷದ ಸಂಭ್ರಮದಲ್ಲಿ ಕಪ್ಪು ಚುಕ್ಕೆ ಮೂಡದಂತೆ ಮುಂಜಾಗ್ರತಾ ಕ್ರಮವಾಗಿ 10 ಸಾವಿರಕ್ಕೂ ಅಧಿಕ ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದೆ.

ವರ್ಷಾಚರಣೆ ನೆಪದಲ್ಲಿ ಬಲವಂತವಾಗಿ ಶುಭ ಕೋರಿ ಅನುಚಿತವಾಗಿ ವರ್ತಿಸಿದರೆ ಸಹಿಸುವುದಿಲ್ಲ. ಜನರಿಗೆ ಬಲವಂತವಾಗಿ ಕೈ ಕುಲುಕುವುದು, ಮೈ ಮೇಲೆ ಬೀಳುವುದು ಸೇರಿದಂತೆ ಅಸಭ್ಯವಾಗಿ ನಡೆದುಕೊಳ್ಳುವ ಕಿಡಿಗೇಡಿಗಳನ್ನು ಮುಲಾಜಿಲ್ಲದೆ ಬಂಧಿಸಲಾಗುತ್ತದೆ ಎಂದು ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹೊಸ ವರ್ಷಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ಜಾಗ್ರತೆ ವಹಿಸಲಾಗಿದೆ. ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 11 ಡಿಸಿಪಿಗಳು, 70 ಎಸಿಪಿ, 230 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 10 ಸಾವಿರ ಪೊಲೀಸರು ಭದ್ರತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿ.31ರ ಸಂಜೆ 4ರಿಂದ ಜ.1ರ ಬೆಳಗ್ಗೆ 8ರವರೆಗೆ ಎರಡು ಪಾಳಿಗಳಲ್ಲಿ ಬಂದೋಬಸ್‌್ತ ಕೆಲಸಕ್ಕೆ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಇವರಲ್ಲದೆ 270 ಹೊಯ್ಸಳ ವಾಹನಗಳು, ಗೃಹ ರಕ್ಷಕ ದಳ ಹಾಗೂ ರಾಜ್ಯ ಮತ್ತು ನಗರ ಸಶಸ್ತ್ರ ಮೀಸಲು ಪಡೆಗಳನ್ನು ಸಹ ಬಳಸಿಕೊಳ್ಳಲಾಗುತ್ತದೆ. ಜತೆಗೆ ಭದ್ರತೆಗೆ ಕೆಲ ಸೂಕ್ಷ್ಮ ಪ್ರದೇಶ ವ್ಯಾಪ್ತಿ ಖಾಸಗಿ ಕಂಪನಿ, ಹೊಟೇಲ್‌, ರೆಸ್ಟೋರೆಂಟ್‌ಗಳ ಸೆಕ್ಯುರಿಟಿಗಳ ನೆರವನ್ನು ಪಡೆಯಲಾಗುತ್ತದೆ ಎಂದು ವಿವರಿಸಿದರು.

ಡ್ರಗ್ಸ್‌ ಪತ್ತೆಗೆ ವಿಶೇಷ ಶ್ವಾನ ದಳ:

ಹೊಸ ವರ್ಷ ಸಂಬಂಧ ನಗರದ ಕೆಲವು ಪಂಚಾತಾರಾ ಹೋಟೆಲ್‌ಗಳು, ಪಬ್‌ಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಹಾಗೂ ಶ್ರೀಮಂತರ ಔತಣ ಕೂಟಗಳಲ್ಲಿ ಡ್ರಗ್ಸ್‌ ಬಳಕೆಯಾಗುತ್ತದೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಆ ಸ್ಥಳಗಳ ಮೇಲೆ ನಿಗಾ ವಹಿಸಲಾಗುತ್ತಿದ್ದು, ಮಾದಕ ವಸ್ತು ವ್ಯಸನಿಗಳ ಪತ್ತೆಗೆ ಶ್ವಾನ ದಳವನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡ್ರಗ್ಸ್‌ ಮಾರಾಟ ಮತ್ತು ಬಳಕೆಗೆ ಪಾರ್ಟಿಗಳ ಆಯೋಜಕರು ಅವಕಾಶ ನೀಡಬಾರದು. ಈ ಸೂಚನೆ ಹೊರತಾಗಿಯೂ ಡ್ರಗ್ಸ್‌ ಪೂರೈಕೆಯಾದರೆ ಅಂತಹ ವಾಣಿಜ್ಯ ಕೇಂದ್ರಗಳ ಪರವಾನಗಿ ರದ್ದುಪಡಿಸುವಂತೆ ಸಂಬಂಧ ಪಟ್ಟಇಲಾಖೆಗೆ ಪತ್ರ ಬರೆಯಲಾಗುತ್ತದೆ. ಅಲ್ಲದೆ, ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಲಾಗುತ್ತದೆ ಎಂದು ಎಚ್ಚರಿಸಿದರು.

ಡ್ರೋನ್‌ ಕಣ್ಣು:

ನಗರದ ವ್ಯಾಪ್ತಿಯಲ್ಲಿ ಡ್ರೋನ್‌ ಕ್ಯಾಮೆರಾ ಸೇರಿದಂತೆ 1500 ಕ್ಯಾಮೆರಾಗಳನ್ನು ಬಂದೋಬಸ್‌್ತ ಕಾರ್ಯದಲ್ಲಿ ಉಪಯೋಗಿಸಲಾಗುತ್ತದೆ. ಇದರಲ್ಲಿ 500ಕ್ಕೂ ಹೆಚ್ಚು ಕ್ಯಾಮೆರಾಗಳು ಹೊಸ ವರ್ಷಾಚರಣೆ ಕೇಂದ್ರವಾಗಿ ಎಂ.ಜಿ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿ ಅಳವಡಿಸಲಾಗುತ್ತದೆ ಎಂದು ಆಯುಕ್ತರು ವಿವರಿಸಿದರು.

ಈ ಕ್ಯಾಮೆರಾಗಳನ್ನು ಲೈವ್‌ ಆಗಿ ನಿರ್ವಹಣೆ ಮಾಡಲಾಗುತ್ತದೆ. ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಯಲ್ಲಿ ಬೈನಾಕುಲರ್‌ ಮತ್ತು ಟಾಚ್‌ರ್‍ ಸಹಿತ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಕಿಡಿಗೇಡಿತನ, ದುಷ್ಕೃತ್ಯ ಎಸಗುವವರ ವಿರುದ್ಧ ಕೂಡಲೇ ಕ್ರಮ ಜರುಗಿಸಲಾಗುತ್ತದೆ ಎಂದರು.

ಮಹಿಳೆಯರ ಸುರಕ್ಷತೆಗೆ ಆದ್ಯತೆ:

ಸಂಭ್ರಮದಲ್ಲಿ ಮಹಿಳೆಯರ ಸುರಕ್ಷತೆಗೆ ಕೂಡಾ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದಕ್ಕಾಗಿ 24 ಗಂಟೆ ಸೇವೆಗೆ ಹೊಯ್ಸಳ ಸಿಬ್ಬಂದಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ತಮ್ಮ ಸುರಕ್ಷತೆಗೆ ಮಹಿಳೆಯರು ಪೊಲೀಸರ ಸುರಕ್ಷಾ ಆ್ಯಪ್‌ ಬಳಸಬಹುದು. ರಾತ್ರಿ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದರೆ ನೆರವಿಗೆ ಪೊಲೀಸ್‌ ನಿಯಂತ್ರಣ ಕೊಠಡಿ ಡಯಲ್‌ 100ಗೆ ಕರೆ ಮಾಡುವಂತೆ ಆಯುಕ್ತರು ಮನವಿ ಮಾಡಿದ್ದಾರೆ.

ಡ್ರಿಂಕ್‌ ಆ್ಯಂಡ್‌ ಡ್ರೈವ್‌ಗೆ ದಂಡ

ಹೊಸ ವರ್ಷಾಚರಣೆ ಸಡಗರದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ದಂಡ ತೆರಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಡಿ.31ರ ರಾತ್ರಿಯಿಂದ ಜನವರಿ 1ರ ಮುಂಜಾನೆ ವರೆಗೆ ಪಾನಮತ್ತ ಚಾಲಕರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿ ವಾಹನ ಜಪ್ತಿ ಮಾಡಲಾಗುತ್ತದೆ ಎಂದು ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ ಸ್ಪಷ್ಟಪಡಿಸಿದರು.

ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಐಪಿಸಿ ಕಲಂ 279 ಅಡಿ ಸಾರ್ವಜನಿಕ ರಸ್ತೆಯಲ್ಲಿ ಜನ ಜೀವನಕ್ಕೆ ಅಪಾಯ ಮಾಡುವಂತೆ ಚಾಲನೆ ಆರೋಪದಡಿ ಕೇಸ್‌ ದಾಖಲಿಸಲಾಗುತ್ತದೆ. ವಾಹನ ಮತ್ತು ಡಿಎಲ್‌ ವಶಕ್ಕೆ ಪಡೆಯುತ್ತೇವೆ. ನ್ಯಾಯಾಲಯಕ್ಕೆ ತೆರಳಿ .10 ಸಾವಿರ ದಂಡ ಪಾವತಿಸಬೇಕು. ಆದರೆ ಚಾಲನಾ ಪರವಾನಗಿ ಅಮಾನತುಗೊಳ್ಳುತ್ತದೆ.

ಹೀಗಾಗಿ, ಸ್ವಂತ ವಾಹನದಲ್ಲಿ ಹೊರಗೆ ಹೋಗಿ ಪಾರ್ಟಿ ಮಾಡುವವರು ಮದ್ಯ ಸೇವಿಸಿದರೆ ವಾಹನ ಓಡಿಸದೆ, ಸ್ನೇಹಿತರ ನೆರವು ಪಡೆಯಬೇಕು ಎಂದು ಪೊಲೀಸರು ಸಲಹೆ ನೀಡಿದರು.

ಪಾರ್ಟಿ ಮಾಡುವವರಿಗೆ ಆಯುಕ್ತ ಸಲಹೆ

* ತಮ್ಮ ಪರಿಚಿತರು, ಸ್ನೇಹಿತರು, ಸಂಬಂಧಿಕರ ಜತೆ ಪಾರ್ಟಿ ಮಾಡಬೇಕು.

* ಅಪರಿಚಿತರಿಂದ ಮದ್ಯ ಸೇರಿದಂತೆ ಯಾವುದೇ ಪಾನೀಯಗಳನ್ನು ಸ್ವೀಕರಿಸಬಾರದು.

* ಪಾರ್ಟಿ ಸಂಭ್ರಮದಲ್ಲಿ ಡ್ರಗ್ಸ್‌ ಬಳಕೆ ಮಾಡಬಾರದು.

* ಪಾನಮತ್ತರಾಗಿ ವಾಹನ ಚಾಲನೆ ಸುತರಾಂ ಸರಿಯಲ್ಲ.

* ಬಲವಂತವಾಗಿ ಶುಭ ಕೋರುವುದು, ಮಹಿಳೆಯರ ಜತೆ ಅಸಭ್ಯ ವರ್ತನೆ ಬೇಡ.

* ಬಿಬಿಎಂಪಿ ಮೈದಾನಗಳಲ್ಲಿ ಪಾರ್ಟಿ ಆಯೋಜನೆಗೆ ಅವಕಾಶವಿಲ್ಲ.

ಮದ್ಯ ಮಾರಾಟ ವಿಸ್ತರಣೆ

ಹೊಸ ವರ್ಷಾಚರಣೆ ನಿಮಿತ್ತ ನಗರದ ಸರಹದ್ದಿನಲ್ಲಿ ಡಿ.31ರಂದು ರಾತ್ರಿ 2ರ ವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಪ್ರತಿ ದಿನಕ್ಕಿಂತ ಅಂದು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಸೇರಿದಂತೆ ಮದ್ಯ ಮಾರಾಟ ಕೇಂದ್ರಗಳ ಒಂದು ಗಂಟೆ ಹೆಚ್ಚು ವಹಿವಾಟು ನಡೆಸಲಿವೆ.

ವಾಹನ ಸಂಚಾರ ನಿಷೇಧ

ನಗರ ವ್ಯಾಪ್ತಿಯ ತುಮಕೂರು, ವಿಮಾನ ನಿಲ್ದಾಣ, ಮೈಸೂರು ರಸ್ತೆಗಳು ಹಾಗೂ ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್‌ ಸೇರಿ ನಗರದ ಎಲ್ಲ 44 ಮೇಲ್ಸೇತುವೆಗಳಲ್ಲಿ ಡಿ.31 ರಂದು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.

ಎಂ.ಜಿ.ರಸ್ತೆ ಕಡೆ ವಾಹನ ಓಡಾಟಕ್ಕೆ ಬ್ರೇಕ್‌

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಸಂಜೆ 4ರಿಂದ ರಾತ್ರಿ 2ರವರೆಗೆ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿ ವಾಹನ ಓಡಾಟ ಹಾಗೂ ನಿಲುಗಡೆಗೆ ನಿರ್ಬಂಧಿಸಲಾಗಿದೆ.

ಹೊಸ ವರ್ಷಾಚರಣೆಗೆ ಸಂಭ್ರಮಕ್ಕೆ ಪೊಲೀಸರು ಅಡ್ಡಪಡಿಸುವುದಿಲ್ಲ. ಆದರೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮಹಿಳೆಯರ ಸುರಕ್ಷತೆಗೆ ಭಂಗ ಉಂಟಾಗದಂತೆ ಆಚರಣೆ ಇರಬೇಕು. ತಪ್ಪು ಮಾಡಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ.

-ಎಸ್‌.ಭಾಸ್ಕರ್‌ ರಾವ್‌, ಆಯುಕ್ತ, ಬೆಂಗಳೂರು ನಗರ.

Follow Us:
Download App:
  • android
  • ios