ಖಾನಾಪುರ(ಡಿ.07): ಕರ್ನಾಟಕ ರಾಜ್ಯದಿಂದ ಗೋವಾದತ್ತ ಹೋಗುವ ತಾಲೂಕಿನ ಕಣಕುಂಬಿ ಅರಣ್ಯ ಪ್ರದೇಶದ ಬೆಳಗಾವಿ- ಚೋರ್ಲಾ ರಾಜ್ಯ ಹೆದ್ದಾರಿಯ ಪಾರವಾಡ, ಬೇಟಣೆ, ಪಾರವಾಡ ಗೌಳಿ ವಾಡಾ ಗ್ರಾಮಗಳ ಬಳಿ ಕಳೆದ ಮೂರ್ನಾಲ್ಕು ದಿನಗಳಿಂದ ಹುಲಿ ಸಂಚರಿಸುತ್ತಿರುವುದಾಗಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. 

ಗುರುವಾರ ಮಧ್ಯಾಹ್ನ ಪಾರವಾಡ ಕ್ರಾಸ್ ಬಳಿ ಹೋಗುತ್ತಿದ್ದ ಕಾಲಮನಿ ಗ್ರಾಮದ ಕಿರಣ ಮಾದಾರ ಎಂಬ ವ್ಯಕ್ತಿಗೆ ಹುಲಿ ರಸ್ತೆ ದಾಟುತ್ತಿರುವಾಗ ಗೋಚರಿಸಿದೆ. ಹಾಡಹಗಲೇ ಹುಲಿ ಈ ಭಾಗದಲ್ಲಿ ಸಂಚರಿಸಿದ್ದರಿಂದ ಮೂರೂ ಗ್ರಾಮಗಳ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ವಿಷಯವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಹುಲಿಯಿಂದ ಜನರಿಗೆ ತೊಂದರೆಯಾಗದಂತೆ ಕ್ರಮ ಜರುಗಿಸಬೇಕು ಎಂದು ಪಾರವಾಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೇ ಅರಣ್ಯ ಪ್ರದೇಶದ ಪಾರವಾಡ ಗೌಳಿವಾಡಾ ಗ್ರಾಮಕ್ಕೆ ಕಳೆದ ತಿಂಗಳಷ್ಟೇ ಚಿರತೆಯೊಂದು ನುಗ್ಗಿ 5 ವರ್ಷದ ಬಾಲಕನ ಮೇಲೆ ದಾಳಿ ನಡೆಸಿತ್ತು. ಈಗ ಆ ಬಾಲಕ ಪ್ರಾಣಾಪಾಯದಿಂದ ಪಾರಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೆ ಬೇಟನೆ ಮತ್ತು ಪಾರವಾಡ ಕ್ರಾಸ್ ಪ್ರದೇಶದಲ್ಲಿ ಹುಲಿ ಸಂಚರಿಸಿದ ವದಂತಿ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಟ್ರಾಪ್ ಕ್ಯಾಮೆರಾ ಅಳವಡಿಕೆ: 

ಪಾರವಾಡ ಗ್ರಾಮದ ಬಳಿ ಹುಲಿ ಕಾಣಿಸಿಕೊಂಡ ವಿಷಯವಾಗಿ ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಪಾರವಾಡ ಕ್ರಾಸ್ ಬಳಿ ಹುಲಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಇಲಾಖೆಯಿಂದ ಕೆಲವೆ ಡೆ ಟ್ರ್ಯಾಪ್ ಕಾಮೆರಾ ಅಳವಡಿಸಲಾಗಿದೆ. ಹುಲಿಯ ಬಗ್ಗೆ ಇಲಾಖೆಯ ಮೂಲಗಳಿಂದ ಮಾಹಿತಿ ಸಂಗ್ರಹಿಸ ಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಬ್ಬರೇ ಅರಣ್ಯ ದೊಳಗೆ ಸಂಚರಿಸದಂತೆ ಮತ್ತು ತಮ್ಮ ಜಾನುವಾರುಗಳನ್ನು ಅರಣ್ಯದೊಳಗೆ ಬಿಡದಂತೆ ಸೂಚಿಸಲಾಗಿದೆ.