ಹಳ್ಳಕ್ಕೆ ಬಿದ್ದ ಕಾರು: ಜಲಪಾತ ವೀಕ್ಷಣೆಗೆ ಬಂದಿದ್ದ ಹುಬ್ಬಳ್ಳಿ ಮೂಲದ ಮೂವರ ದುರ್ಮರಣ
ಕೋಡನಮನೆಯ ಹಳ್ಳಕ್ಕೆ ಬಿದ್ದ ಕಾರು| ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಬಳಿ ನಡೆದನ ಘಟನೆ| ಹುಬ್ಬಳ್ಳಿ ಕೇಶ್ವಾಪುರ ಮೂಲದ ಮೂವರು ಸಾವು, ಮತ್ತೋರ್ವ ಯುವತಿ ನಾಪತ್ತೆ|
ಸಿದ್ದಾಪುರ(ಅ.16): ತಾಲೂಕಿನ ಉಂಚಳ್ಳಿ ಜಲಪಾತ ವೀಕ್ಷಣೆಗೆ ಬಂದಿದ್ದ ಹುಬ್ಬಳ್ಳಿ ಮೂಲದ ಪ್ರವಾಸಿಗರ ಕಾರು ಹೆಗ್ಗರಣಿ ಸಮೀಪದ ಕೋಡನಮನೆಯ ಹೊಳೆಗೆ (ಹಳ್ಳ) ಬಿದ್ದು ಕಾರಿನಲ್ಲಿದ್ದ ಮೂರು ಮೃತಪಟ್ಟಿದ್ದು, ಒಬ್ಬರು ಕಾಣೆಯಾಗಿದ್ದಾರೆ.
ಹುಬ್ಬಳ್ಳಿ ಕೇಶ್ವಾಪುರ ಮೂಲದ ನಿಶ್ಚಲ್, ರೋಷನ್, ಸುಷ್ಮಾ ಅವರ ಮೃತದೇಹ ಸಿಕ್ಕಿದೆ. ಅಕ್ಷತಾ ಎನ್ನುವವರು ಪತ್ತೆಯಾಗಿಲ್ಲ. ಬುಧವಾರ ಬೆಳಗ್ಗೆ ಉಂಚಳ್ಳಿ ಜಲಪಾತಕ್ಕೆ ಬಂದಿದ್ದ ಈ ಪ್ರವಾಸಿಗರು ಸಂಜೆ 5ರ ವೇಳೆಗೆ ವಾಪಸ್ಸಾಗುತ್ತಿದ್ದಾಗ ಭಾರಿ ಮಳೆ ಸುರಿಯುತ್ತಿದ್ದ ಕಾರಣ ಮುಂದಿನ ದಾರಿ ಕಾಣದೇ ಈ ಅವಘಡ ಸಂಭವಿಸಿರುವುದಾಗಿ ಊಹಿಸಲಾಗಿದೆ.
ಮಾನ್ವಿ: ಮಿನಿ ಲಾರಿ ಪಲ್ಟಿ, ಇಬ್ಬರ ದುರ್ಮರಣ
ಬುಧವಾರ ಸಂಜೆಯ ವೇಳೆಗೆ ಕಾರು ಹಳ್ಳಕ್ಕೆ ಬಿದ್ದಿದ್ದು, ತುಂಬಿ ಹರಿಯುತ್ತಿದ್ದ ಹೊಳೆಗೆ ಬಿದ್ದ ಕಾರು ಸುಮಾರು 75 ಮೀ. ಹೊಳೆಯ ನೀರಿನಲ್ಲಿ ತೇಲಿ ಹೋಗಿ ಮಧ್ಯೆದಲ್ಲಿ ಸಿಲುಕಿಕೊಂಡಿತ್ತು. ಗುರುವಾರ ಬೆಳಗ್ಗೆ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ತಿಳಿಸಿದ್ದು ಅವರು ಸ್ಥಳಕ್ಕೆ ಆಗಮಿಸಿ ಹುಡುಕಾಟದ ಕಾರ್ಯಾಚರಣೆ ಆರಂಭಿಸಿದರು. ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಕಾರಿನೊಳಗಿದ್ದ ಮೂವರ ಶವ ಸಿಕ್ಕಿದ್ದು, ಕಾರಿನ ಒಂದು ಬಾಗಿಲು ತೆರೆದಿದ್ದ ಕಾರಣ ಅಕ್ಷತಾ ಹಿರೇಮಠ ಎನ್ನುವವರು ನೀರಿನಲ್ಲಿ ತೇಲಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ಅವರಿಗಾಗಿ ಹುಡುಕಾಟ ಮುಂದುವರಿದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜ, ಡಿವೈಎಸ್ಪಿ ಜಿ.ಟಿ. ನಾಯ್ಕ ಭೇಟಿ ನೀಡಿದ್ದು, ಪಿಐ ಪ್ರಕಾಶ, ಪಿಎಸ್‌ಐ ಮಂಜುನಾಥ ಬಾರ್ಕಿ ಹಾಗೂ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಕಾರು ಮತ್ತು ಮೃತದೇಹಗಳನ್ನು ಮೇಲಕ್ಕೆ ತೆಗೆದಿದ್ದಾರೆ.