Asianet Suvarna News Asianet Suvarna News

ಅಕ್ರಮ ಧಾರ್ಮಿಕ ಕಟ್ಟಡಗಳ ಸಮೀಕ್ಷೆಗೆ 3 ದಿನ ಗಡುವು

ಬಿಬಿಎಂಪಿಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡ ನಿರ್ಮಾಣ| ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶ| 

Three Days Deadline to Officers for Survey of Illegal Religious Buildings grg
Author
Bengaluru, First Published Jan 21, 2021, 10:24 AM IST

ಬೆಂಗಳೂರು(ಜ.21):  ರಸ್ತೆ, ಪಾದಚಾರಿ ಮಾರ್ಗ, ಉದ್ಯಾನವನ, ಆಟದ ಮೈದಾನ, ಸರ್ಕಾರಿ ಜಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮಂದಿರ, ಮಸೀದಿ, ಚರ್ಚ್‌, ಗುರುದ್ವಾರ ಸೇರಿದಂತೆ ಧಾರ್ಮಿಕ ಕಟ್ಟಡಗಳ ಸಮೀಕ್ಷೆ ಮಾಡಿ 3 ದಿನಗಳ ಒಳಗೆ ವರದಿ ನೀಡುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಿಬಿಎಂಪಿಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡ ನಿರ್ಮಾಣ ಮಾಡಿರುವ ಸಂಬಂಧ ಬುಧವಾರ ವಿಶೇಷ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕೆ ಮಾತನಾಡಿದ ಆಯುಕ್ತರು, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ 2009ರಲ್ಲಿಯೇ ಆದೇಶ ಮಾಡಿದೆ. ನಗರದಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡ ನಿರ್ಮಾಣ ಕುರಿತು ಜ.28ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ಇರುವ ಕಾರಣ ಕೋರ್ಟ್‌ಗೆ ನಿಖರವಾದ ಮಾಹಿತಿ ನೀಡಲು ಮೂರು ದಿನದಲ್ಲಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.

ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಂದ 6 ಲಕ್ಷ ದೇಣಿಗೆ

ಸಮೀಕ್ಷೆ ನಡೆಸುವಾಗ 2009ರ ಮುನ್ನ ಹಾಗೂ 2009ರ ನಂತರ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ಎಲ್ಲ ವಾರ್ಡ್‌ ಎಂಜಿನಿಯರ್‌ ಹಾಗೂ ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ನಡೆಸಿ ವರದಿ ನೀಡಬೇಕು. ಜತೆಗೆ 2009ರ ನಂತರ ನಿರ್ಮಿಸಿದ ಧಾರ್ಮಿಕ ಕಟ್ಟಡಗಳಿಗೆ ಜ.27ರ ಒಳಗೆ ನೋಟಿಸ್‌ ಜಾರಿ ಮಾಡಿ ಧಾರ್ಮಿಕ ಕಟ್ಟಡಗಳು ನಿರ್ಮಿಸಿದವರಿಂದ ಒಂದು ವಾರದಲ್ಲಿ ಸಮಜಾಯಿಷಿ ಪಡೆಯಬೇಕು ಎಂದು ನಿರ್ದೇಶಿಸಿದ್ದಾರೆ. ಹೈಕೋರ್ಟ್‌ಗೆ ವರದಿ ಸಲ್ಲಿಸಿದ ನಂತರ ಪೊಲೀಸ್‌ ಇಲಾಖೆಯ ಭದ್ರತೆಯೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿನ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.

ಈ ವೇಳೆ ವಿಶೇಷ ಆಯುಕ್ತರಾದ ಜೆ.ಮಂಜುನಾಥ್‌, ಬಸವರಾಜ್‌, ರಾಜೇಂದ್ರಚೋಳನ್‌, ತುಳಸಿ ಮದ್ದಿನೇನಿ, ರವೀಂದ್ರ, ವಲಯಗಳ ಜಂಟಿ ಆಯುಕ್ತರುಗಳು, ಮುಖ್ಯ ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
 

Follow Us:
Download App:
  • android
  • ios