ತುರುವೇಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಗೆಲುವಿನಲ್ಲಿ ಸ್ವಾಭಿಮಾನಿ ಕಾರ್ಯಕರ್ತರ ಶ್ರಮ ಇದೆ ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ತುರುವೇಕೆರೆ : ತುರುವೇಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಗೆಲುವಿನಲ್ಲಿ ಸ್ವಾಭಿಮಾನಿ ಕಾರ್ಯಕರ್ತರ ಶ್ರಮ ಇದೆ ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇದು ತಮ್ಮ ಗೆಲುವಲ್ಲ. ಅದು ಜೆಡಿಎಸ್‌ ಕಾರ್ಯಕರ್ತರ ಗೆಲುವು. ಗೆಲುವನ್ನು ಜೆಡಿಎಸ್‌ ಕಾರ್ಯಕರ್ತರಿಗೆ ಸಮರ್ಪಿಸುವುದಾಗಿ ಹೇಳಿದರು.

ತುರುವೇಕೆರೆ ಕ್ಷೇತ್ರದ ಜನತೆ ತಮ್ಮ ಮೇಲೆ ಅಭಿಮಾನವಿಟ್ಟು 10 ಸಾವಿರ ಅಂತರದಿಂದ ಗೆಲ್ಲಿಸಿದ್ದಾರೆ. ಇದೊಂದು ಅಭೂತಪೂರ್ವ ಗೆಲುವು. ತಮ್ಮ ಗೆಲುವಿಗೆ ಹಗಲಿರುಳು ಹೋರಾಡಿದ ಜೆಡಿಎಸ್‌ ಕಾರ್ಯಕರ್ತರು ಮತ್ತು ನಮಗೆ ಆಶೀರ್ವಾದ ಮಾಡಿದ ಕ್ಷೇತ್ರದ ಜನತೆಗೆ ಹೃದಯಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಈ ಬಾರಿಯ ಚುನಾವಣೆ ಹಣ ಬಲವೋ, ಜನ ಬಲವೋ ಎಂಬಂತೆ ಬಿಂಬಿತವಾಗಿತ್ತು. ಆದರೆ ಕ್ಷೇತ್ರದ ಜನ ಹಣಕ್ಕೆ ಬೆಲೆ ನೀಡದೆ ಜನ ಬಲಕ್ಕೆ ಗೆಲುವು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ನೀಡಿದ ಪಂಚರತ್ನ ಯೋಜನೆಗಳಿಗೂ ಕ್ಷೇತ್ರದ ಜನರ ಸ್ಪಂದನೆ ಸಿಕ್ಕಿದ್ದು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕ್ಷೇತ್ರದ ದಬ್ಬೇಗಟ್ಟಹಾಗೂ ಸಿ.ಎಸ್‌.ಪುರ ಹೋಬಳಿಗಳಲ್ಲಿ ನನ್ನ ಪರವಾಗಿ ಪ್ರಚಾರ ಮಾಡಿದ್ದು ಸಹ ತಾವು ಗೆಲುವು ಸಾಧಿಸಲು ಕಾರಣವಾಯಿತು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದರು ನಮ್ಮ ಪಕ್ಷಕ್ಕೆ ರಾಜ್ಯದಲ್ಲಿ 19 ಸ್ಥಾನ ಲಭಿಸಿದೆ. ವಿರೋಧ ಪಕ್ಷದಲ್ಲಿದ್ದರೂ ಸಹ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತೇನೆ. ಭ್ರಷ್ಟಾಚಾರ ರಹಿತ ಆಡಳಿತ ಮಾಡುವ ಭರವಸೆ ನೀಡಿದ ಕೃಷ್ಣಪ್ಪ ಸರ್ಕಾರ ಸಂಪೂರ್ಣ ಕಾರ್ಯಾರಂಭ ಮಾಡಿದ ನಂತರ ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹೆಡಿಗಿಹಳ್ಳಿ ವಿಶ್ವನಾಥ್‌, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್‌, ಬಿ.ಎಸ್‌.ದೇವರಾಜು, ವೆಂಕಟೇಶ್‌, ಕೃಷ್ಣಪ್ಪ, ವಿಜಯೇಂದ್ರ, ಬಸವರಾಜು, ಪುನೀತ್‌, ಮುನಿಯೂರು ರಂಗಸ್ವಾಮಿ, ಕೃಷ್ಣಯ್ಯ, ರಾಮಕೃಷ್ಣ, ಚೇತನ್‌, ಜುಂಜಪ್ಪ ಸೇರಿದಂತೆ ಮುಖಂಡರು ಇದ್ದರು.

ಜೆಡಿಎಸ್ ಮಹಾ ಕುಸಿತ

ಬೆಂಗಳೂರು (ಮೇ.14): ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಾದ್ಯಂತ ಕಾಂಗ್ರೆಸ್ ತನ್ನ ವೋಟ್‌ ಶೇರ್‌ಗಳನ್ನುಶೇಕಡಾ 4 ಕ್ಕಿಂತ ಹೆಚ್ಚಿಸಿಕೊಂಡಿದೆ. ಇದರಿಂದಾಗಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬರೋಬ್ಬರಿ 135 ಸೀಟ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೇ.10 ರಂದು ನಡೆದ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಬಹುತೇಕ ಎಲ್ಲಾ ಕಡೆ ಕಾಂಗ್ರೆಸ್‌ನ ಮತ ಪ್ರಮಾಣ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಒಂದೆಡೆ ಕಾಂಗ್ರೆಸ್‌ ಪಕ್ಷದ ವೋಟ್‌ ಶೇರ್‌ ಅಂದಾಜು ಶೇ. 4ಕ್ಕಿಂತ ಹೆಚ್ಚು ಏರಿಕೆಯಾಗಿದ್ದರೆ, ಜೆಡಿಎಸ್‌ನ ವೋಟ್‌ ಶೇರ್‌ನಲ್ಲಿ ಮಹಾಕುಸಿತ ಉಂಟಾಗಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ಜೆಡಿಎಸ್‌ ವೋಟ್‌ ಶೇರ್‌ನಲ್ಲಿ ಶೇ.5ಕ್ಕಿಂತ ಹೆಚ್ಚು ಪ್ರಮಾಣದ ಏರಿಕೆಯಾಗಿದೆ ಎಂದು ವಿಧಾನಸಭೆ ಚುನಾವಣೆಯ ಕೇಂದ್ರ ಚುನಾವಣಾ ಆಯೋಗದ ಡೇಟಾ ತಿಳಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಶೇ. 38.04ರಷ್ಟು ವೋಟ್‌ ಶೇರ್‌ ಪಡೆದುಕೊಂಡಿದ್ದರೆ, ಬಿಜೆಪಿ ಶೇ.36.22 ರಷ್ಟು ವೋಟ್‌ಗಳನ್ನು ಪಡೆದುಕೊಂಡಿತ್ತು. ಜಾತ್ಯಾತೀತ ಜನತಾದಳ ಪಕ್ಷ ಶೇ. 18.36ರಷ್ಟು ವೋಟ್‌ ಶೇರ್‌ ಪಡೆದಿತ್ತು.


ಆದರೆ, ಈಗಷ್ಟೇ ಮುಗಿದ 16ನೇ ವಿಧಾನಸಭೆ ಚುನಾವಣೆಯ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ವೋಟ್‌ ಶೇರ್‌ ಪ್ರಮಾಣ ದಿಗ್ಗನೆ ಏರಿದ್ದು, ಬರೋಬ್ಬರಿ 42.88ರಷ್ಟು ವೋಟ್‌ ಶೇರ್‌ ಪಡೆದುಕೊಂಡಿದೆ. ಇನ್ನು ಜೆಡಿಎಸ್‌ನ ವೋಟ್‌ಶೇರ್‌ನಲ್ಲಿ ದೊಡ್ಟ ಮಟ್ಟದ ಕುಸಿತವಾಗಿದ್ದು ಶೇ. 13.29ಕ್ಕೆ ಇಳಿದಿದ್ದರೆ, ಬಿಜೆಪಿಯ ವೋಟ್‌ ಶೇರ್‌ ಪ್ರಮಾಣ ಶೇ. 36ಕ್ಕೆ ಕುಸಿದಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸೀಟ್‌ನಲ್ಲಿ ಗೆಲುವು ಕಂಡಿದ್ದರೆ ಬಿಜೆಪಿ 65 ಹಾಗೂ ಜೆಡಿಎಸ್‌ 19 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ವರದಿಗಳ ಪ್ರಕಾರ, ಕಾಂಗ್ರೆಸ್‌ ಕಿತ್ತೂರು ಕರ್ನಾಟಕ ವಲಯದಲ್ಲಿ ತನ್ನ ದೊಡ್ಡ ಪಾಲನ್ನು ಪಡೆದುಕೊಂಡಿದೆ. ಒಟ್ಟಾರೆ 50 ಕ್ಷೇತ್ರಗಳಿರುವ ಈ ವಲಯದಲ್ಲಿ ಕಾಂಗ್ರೆಸ್‌ ಪಕ್ಷ 33 ಸೀಟ್‌ಗಳಲ್ಲಿ ಗೆಲುವು ಸಾಧಿಸಿದೆ.

ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದ್ದ 41 ಸೀಟ್‌ಗಳ ಪೈಕಿ ಕಾಂಗ್ರೆಸ್‌ ಪಕ್ಷ 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದೇ ವಲಯದಲ್ಲಿ ಕಾಂಗ್ರೆಸ್‌ ಕಳೆದ ಬಾರಿ 20 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಇನ್ನೊಂದೆಡೆ ಈ ವಲಯದಲ್ಲಿ ಬಿಜೆಪಿ 17 ಕ್ಷೇತ್ರವನ್ನು ಕಳೆದ ಬಾರಿ ಗೆದ್ದಿದ್ದರೆ, ಈ ಬಾರಿ ಕೇವಲ 10 ಸೀಟ್‌ಗಳಲ್ಲಿ ಗೆಲುವು ಕಂಡಿದೆ.