ಮಾತೃ ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಚಿಂತನೆ
ಮಾತೃ ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಶಿಕ್ಷಣ, ಜ್ಞಾನ-ವಿಜ್ಞಾನಗಳನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಚಿಂತಿಸುತ್ತಿದೆ. ಈ ಮಟ್ಟಕ್ಕೆ ಕನ್ನಡ ಭಾಷೆಯನ್ನು ಬೆಳೆಸುವ, ಪರಿವರ್ತಿಸುವ ಕೆಲಸ ಭಾಷಾ ತಜ್ಞರಿಂದ ಆಗಬೇಕಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ತುಮಕೂರು (ನ.02): ಮಾತೃ ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಶಿಕ್ಷಣ, ಜ್ಞಾನ-ವಿಜ್ಞಾನಗಳನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಚಿಂತಿಸುತ್ತಿದೆ. ಈ ಮಟ್ಟಕ್ಕೆ ಕನ್ನಡ ಭಾಷೆಯನ್ನು ಬೆಳೆಸುವ, ಪರಿವರ್ತಿಸುವ ಕೆಲಸ ಭಾಷಾ ತಜ್ಞರಿಂದ ಆಗಬೇಕಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಅಧಿವೇಶನದಲ್ಲಿ ಸಮಗ್ರ ಕನ್ನಡ ಭಾಷೆಯ ಅಭಿವೃದ್ಧಿಗೆ ವಿಧೇಯಕವನ್ನು ಮಂಡಿಸಿದ್ದಾರೆ. ಕರ್ನಾಟಕದಲ್ಲಿ ಉದ್ಯಮವನ್ನು ಆರಂಭಿಸುವಂತಹ ಪ್ರತಿಯೊಬ್ಬ ಉದ್ಯಮಿಯು ಸಹ ತನ್ನ ಉದ್ಯಮದಲ್ಲಿ ಶೇ. 70ರಷ್ಟುಹುದ್ದೆಗಳನ್ನು ಅರ್ಹ ಕನ್ನಡಿಗರಿಗೆ ನೀಡಬೇಕು ಎಂಬಂತಹ ನಿಯಮ ಮಾಡಲಾಗಿದೆ ಎಂದರು.
ಕರುನಾಡು ಒಟ್ಟಾಗಿ ಕರ್ನಾಟಕ ರಾಜ್ಯ ಆದಂತಹ ಈ ಸಂದರ್ಭವನ್ನು ಕನ್ನಡ ಹಬ್ಬವನ್ನಾಗಿ ನಾಡಿನ ಮೂಲೆ ಮೂಲೆಗಳಲ್ಲಿ ಆಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಉದಯವಾಗಿ 67 ವರ್ಷಗಳು ಸಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್, ಹೈದರಾಬಾದ್, ಮುಂಬೈ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ನೆಲ, ಜಲ ಒಗ್ಗೂಡಿದಂತಹ ಹೆಮ್ಮೆಯ ದಿನ. ಸುಮಾರು 2000 ವರ್ಷಗಳ ಇತಿಹಾಸವಿರುವ ಕನ್ನಡ ನಾಡಿನಲ್ಲಿ ಇಲ್ಲಿಯ ರಾಜರು ಮಹಾರಾಜರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ನಾಡು ಕಟ್ಟುವಂತಹ ಭಾಷೆ ಕಟ್ಟುವಂತಹ ಕೆಲಸ ಮಾಡಿದ್ದಾರೆ. ವಿಶೇಷ ಸಾಂಸ್ಕೃತಿಕ ಕಲೆಗಳಾದ ಶಿಲ್ಪಕಲೆ, ಸಂಗೀತ, ನೃತ್ಯಗಳ ಮೂಲಕ ಹಿರಿಮೆಯನ್ನು ಸಾರಿದ್ದಾರೆ. ಮೈಸೂರಿನ ಮಹಾರಾಜರು ವಿಶೇಷವಾಗಿ ನೀರಾವರಿ ಅಚ್ಚುಕಟ್ಟು, ಅಣೆಕಟ್ಟುಗಳನ್ನು ನಿರ್ಮಿಸಿ ರೈತರ ಬದುಕನ್ನು ಹಸನು ಮಾಡಿದ್ದಾರೆ. ಕರ್ನಾಟಕ ರಾಜ್ಯವನ್ನು ಸಾಂಸ್ಕೃತಿಕವಾಗಿ ಆರ್ಥಿಕವಾಗಿ ಸುಧಾರಣೆ ಮಾಡಿದವರೆಲ್ಲರಿಗೂ ಸಹ ಈ ಸುಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ನಮ್ಮ ಸಾಹಿತಿಗಳು, ಕಲಾವಿದರು ಇವರೆಲ್ಲರೂ ಸಹ ನಾವೆಲ್ಲ ಹೆಮ್ಮೆ ಪಡುವ ರೀತಿಯಲ್ಲಿ ಕನ್ನಡವನ್ನು ಕಟ್ಟುವಂತಹ ಕೆಲಸದಲ್ಲಿ ತಮ್ಮನ್ನು ಅನೇಕ ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಅನೇಕ ರಾಜ ಮಹಾರಾಜರುಗಳ ಶೌರ್ಯ, ಹೋರಾಟ ಇವುಗಳನ್ನು ಸಹ ನಾವು ನೆನಪು ಮಾಡಿಕೊಳ್ಳಬೇಕಿದೆ ಎಂದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಜೂನಿಯರ್ ಕಾಲೇಜು ಮೈದಾನ ಆವರಣದವರೆಗೆ ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಯ ಬೆಳ್ಳಿ ರಥದ ಅದ್ಧೂರಿ ಮೆರವಣಿಗೆ ಜರುಗಿತು. ವಿವಿಧ ಇಲಾಖೆಗಳ ಸ್ತಬ್ಧ ಚಿತ್ರ ಸಹ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಕಣ್ಮನ ಸೆಳೆಯಿತು.
ಸಮಾರಂಭದಲ್ಲಿ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್, ಆರ್. ರಾಜೇಂದ್ರ, ಮಹಾನಗರಪಾಲಿಕೆ ಮಹಾ ಪೌರರಾದ ಎಂ. ಪ್ರಭಾವತಿ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಪೂರ್ವಾಡ್, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ವಿ. ಅಜಯ್, ವಾರ್ತಾಧಿಕಾರಿ ಎಂ.ಆರ್. ಮಮತಾ, ಡಿಡಿಪಿಐ ನಂಜಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಭಾಷೆ ಕೇವಲ ಒಂದು ಪ್ರಾಂತ್ಯಕ್ಕಲ್ಲ. ಭಾಷೆ ಜನರನ್ನು ಸಧೃಡಪಡಿಸಬೇಕಾಗುತ್ತದೆ. ಭಾಷೆ ನಮ್ಮನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕನ್ನಡವನ್ನು ಕಟ್ಟುವಂತಹ ಕನ್ನಡವನ್ನು ಬೆಳೆಸುವಂತಹ ಕೆಲಸ ಸರ್ಕಾರದ ಕಡೆಯಿಂದ ಆಗುತ್ತಿದೆ. ಅದೇ ರೀತಿ ಕನ್ನಡ ಕೇವಲ ಭಾವನೆಯ ಭಾಷೆಯಲ್ಲ. ನವೆಂಬರ್ ತಿಂಗಳಲ್ಲಿ ಮಾತ್ರ ನಾವು ಭಾವುಕರಾಗುವ ಅವಶ್ಯಕತೆ ಇಲ್ಲ. ಒಂದು ಭೂ ಭಾಗದಲ್ಲಿ ಬದುಕುವ ಜನರ ಬದುಕನ್ನು ಅಲ್ಲಿನ ಭಾಷೆ ಕಟ್ಟಿಕೊಡುತ್ತದೆ.
ಆರಗ ಜ್ಞಾನೇಂದ್ರ ಸಚಿವ