ಬೆಂಗಳೂರು [ಅ.03]:  ಮನೆಗಳ್ಳತನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿಗಳ ವಿಚಾರಣೆ ವೇಳೆ ಎರಡೂವರೆ ವರ್ಷಗಳ ಹಿಂದೆ ನಡೆದಿರುವ ರೌಡಿಯೊಬ್ಬನ ಕೊಲೆ ರಹಸ್ಯ ಬಯಲಾಗಿದೆ.

ಕೊಲೆ ಆರೋಪಿ ಗೊರಗುಂಟೆಪಾಳ್ಯ ನಿವಾಸಿ ಮಧುಕುಮಾರ್‌ (39) ಹಾಗೂ ಕಳ್ಳತನ ಪ್ರಕರಣದ ದೊಡ್ಡಬಳ್ಳಾಪುರ ನಿವಾಸಿ ಪ್ರವೀಣ್‌(23) ಹಾಗೂ ದಾಸರಹಳ್ಳಿಯ ಪ್ರವೀಣ್‌ ಕುಮಾರ್‌(42) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳಿಂದ 17 ಲಕ್ಷ ರು. ಮೌಲ್ಯದ 495 ಗ್ರಾಂ ಚಿನ್ನಾಭರಣ ಮತ್ತು 40 ಸಾವಿರ ರು. ಜಪ್ತಿ ಮಾಡಲಾಗಿದೆ ಎಂದು ಆರ್‌ಎಂಸಿ ಯಾರ್ಡ್‌ ಪೊಲೀಸರು ಹೇಳಿದರು.

ಮಧುಕುಮಾರ್‌ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದರೂ ಕಳವು ಕೃತ್ಯ ನಿಲ್ಲಿಸಿರಲಿಲ್ಲ. ಆ.26ರಂದು ಆರೋಪಿಗಳು ಗೊರಗುಂಟೆಪಾಳ್ಯದಲ್ಲಿನ ಬಸವಂತಿ ಎಂಬುವರ ಮನೆ ಕಳ್ಳತನ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಕದ್ದ ಚಿನ್ನವನ್ನು ಗಿರವಿ ಅಂಗಡಿ ಇಟ್ಟಿದ್ದ ಪ್ರವೀಣ್‌ ಕುಮಾರ್‌ ಎಂಬಾತನಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. 10ಕ್ಕೂ ಅಧಿಕ ಸರಗಳ್ಳತನ ಪ್ರಕರಣ ಬೆಳಕಿಗೆ ಬಂದಿವೆ.

ಪತ್ನಿಗೆ ಕಿರುಕುಳ ಕೊಟ್ಟಿದ್ದಕ್ಕೆ ಹತ್ಯೆ!

ಕೊಲೆಯಾಗಿರುವ ರೌಡಿಶೀಟರ್‌ ಬಸವ ಮತ್ತು ಮಧುಕುಮಾರ್‌ ಸ್ನೇಹಿತರಾಗಿದ್ದರು. ಬಸವ ಪೀಣ್ಯ ಠಾಣಾ ವ್ಯಾಪ್ತಿಯ ರೌಡಿಶೀಟರ್‌ ಆಗಿದ್ದ. ಮಧುಕುಮಾರ್‌ ಪತ್ನಿ ಬಳಿ ಬಸವ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಇದರಿಂದ ಕೆರಳಿದ್ದ ಮಧುಕುಮಾರ್‌, ಬಸವನನ್ನು ತನ್ನ ಊರಾದ ಚನ್ನರಾಯಪಟ್ಟಣದ ಹುಲಿಯೂರು ದುರ್ಗಕ್ಕೆ ಕರೆಯಿಸಿಕೊಂಡಿದ್ದ. ಬಸವನನ್ನು ಊರಿನ ಕೆರೆಯ ಬಳಿಗೆ ಕರೆದುಕೊಂಡು ಹೋದ ಮಧುಕುಮಾರ್‌ ಆತನಿಗೆ ಅತಿಯಾಗಿ ಮದ್ಯಪಾನ ಮಾಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದ. ನಂತರ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿ, ಶವವನ್ನು ಗುಂಡಿಯೊಂದಕ್ಕೆ ಹಾಕಿ ಹೂತಿಟ್ಟಿದ್ದ. ಇದೀಗ ಮಧುಕುಮಾರ್‌ ಹೇಳಿದ ಮೇಲೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಅಲ್ಲಿನ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.